ಉಡುಪಿ, ಮೇ15(Daijiworld News/SS): ಆಳಸಮುದ್ರ ಮೀನುಗಾರಿಕೆಗೆ ಮಲ್ಪೆ ಬಂದರಿನಿಂದ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಅವಘಡಕ್ಕೆ ಸಿಲುಕಿ ಕಣ್ಮರೆಯಾಗಿದ್ದ ರಮೇಶ್ ಶನಿಯಾರ ಮೊಗೇರ ಅವರ ಚಿಂತೆಯಲ್ಲಿ, ಸಹೋದರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಟ್ಕಳ ಬಂದರು ರಸ್ತೆಯ ಶನಿಯಾರ ಮೊಗೇರ ಅವರ ಪುತ್ರ ಚಂದ್ರಶೇಖರ್ ಮೊಗೇರ (30) ಆದರ್ಶ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಚಂದ್ರಶೇಖರ್ ಅವರ ಲಿವರ್ ವಿಫಲವಾಗಿದ್ದು, ಕಿಡ್ನಿಗಳು ಸಹ ಕಾರ್ಯ ನಿರ್ವಹಣೆ ನಿಲ್ಲಿಸುವ ಹಂತ ತಲುಪಿವೆ. ಅಪಾಯಕಾರಿ ವಿಷ ದೇಹದ ಅಂಗಾಂಗಗಳಿಗೆ ಹಾನಿಯಂಟು ಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಕಣ್ಮರೆಯಾಗಿ ತಿಂಗಳುಗಳ ಬಳಿಕ ಬೋಟ್ನ ಅವಶೇಷದ ಸುದ್ದಿಯಿಂದ ನೊಂದಿದ್ದ ಕುಟುಂಬಕ್ಕೆ ಮತ್ತೊಂದು ಪುತ್ರನ ವಿಷ ಸೇವನೆಯ ಬರ ಸಿಡಿಲು ಬಡಿದು ಮತ್ತಷ್ಟು ಆಘಾತ ತಂದಿದೆ.
ರಮೇಶ್ ಶನಿಯಾರ ಮೊಗೇರ (32) ಸುವರ್ಣ ತ್ರಿಭುಜ ಬೋಟ್ನಲ್ಲಿ ಡಿ. 13 ರಂದು ಮೀನುಗಾರಿಕೆಗೆ ತೆರಳಿ ಬಳಿಕ ನಾಪತ್ತೆಯಾಗಿದ್ದರು. ಇದೇ ಆಘಾತದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಾಗಿದ್ದ ರಮೇಶ್ ಅವರ ಸಹೋದರ ಚಂದ್ರಶೇಖರ್ ಅನ್ನ, ನೀರು ತ್ಯಜಿಸಿ ಮನೆಯ ಮೂಲೆ ಸೇರಿದ್ದರು ಎನ್ನಲಾಗಿದೆ. ಭಟ್ಕಳದಲ್ಲಿ ಮೀನುಗಾರಿಕಾ ವೃತ್ತಿ ಮಾಡುತ್ತಿದ್ದ ಚಂದ್ರಶೇಖರ್ ಬಲಿಷ್ಠ ದೇಹದಾರ್ಢ್ಯ ಹೊಂದಿದ್ದು, ಶ್ರಮ ಜೀವಿಯಾಗಿದ್ದರು.
ಮನೆಗೆ ಆಧಾರ ಸ್ತಂಭವಾಗಿದ್ದ ಸಹೋದರನ ಕಣ್ಮರೆಯಿಂದ ಸಾಕಷ್ಟು ನೊಂದಿದ್ದ ಚಂದ್ರಶೇಖರ್, ತಿಂಗಳ ಹಿಂದಷ್ಟೇ ನೋವು ಮರೆತು ಜನರೊಂದಿಗೆ ಬೆರೆಯಲು ಯತ್ನಿಸಿದ್ದರು. ಮೇ 3 ರಂದು ಸುವರ್ಣ ತ್ರಿಭುಜ ಬೋಟ್ನ ಅವಘಡದ ಸುದ್ದಿ ಕೇಳಿ ಮತ್ತೆ ಖಿನ್ನತೆಗೆ ಒಳಗಾಗಿದ್ದರು. ಆಹಾರ ಸರಿಯಾಗಿ ಸೇವನೆ ಮಾಡದೆ ದೇಹದ ಸ್ಥಿತಿ ಉಲ್ಬಣಗೊಂಡಿತ್ತು. ಇದೇ ನೋವಿನಲ್ಲಿದ್ದ ಚಂದ್ರಶೇಖರ್ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರೆಂದು ತಿಳಿದು ಬಂದಿದೆ. ಇದೀಗ ಚಂದ್ರಶೇಖರ್ ಮೊಗೇರರವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.