ಮಂಗಳೂರು, ಜು. 07(DaijiworldNews/AA): ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ಗಳ ಬ್ಯಾಟರಿಗಳನ್ನು ಮತ್ತು ಕಂಪೌಂಡ್ ಗೇಟ್ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಮುಲ್ಕಿ ಪೊಲೀಸರು ದಸ್ತಗಿರಿ ಮಾಡಿ ಕಳ್ಳತನ ಮಾಡಿದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಕೊಲ್ಲಂ ಜಿಲ್ಲೆ ಹಾಗೂ ತಾಲೂಕಿನ ಇರುಮ್ ಪನಾಂಗಾಡು ಗ್ರಾಮದ ಜಾನಿ ಭವನ್ ನಿವಾಸಿ ಇಟ್ಟಿ ಪನಿಕರ್(58) ಬಂಧಿತ ಆರೋಪಿ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಲ್ಕಿ ರೈಲ್ವೆ ಸ್ಟೇಷನ್ ಬಳಿಯ ಕಿಲ್ಪಾಡಿ ಗ್ರಾಮದ ಕೆ.ಎಸ್.ರಾವ್ ನಗರ ಎಂಬಲ್ಲಿರುವ ಏರ್ ವೆಲ್ ಕಂಪನಿಯ ಮೊಬೈಲ್ ಟವರ್ ಗಳ ಬ್ಯಾಟರಿಗಳನ್ನು ಹಾಗೂ ತಾಳೆಪಾಡಿ ಗ್ರಾಮದ ಎಸ್ ಕೋಡಿ ಎಂಬಲ್ಲಿರುವ ಏರ್ ಟೆಲ್ ಕಂಪನಿಯ ಮೊಬೈಲ್ ಟವರ್ ಗಳ ಬ್ಯಾಟರಿಗಳನ್ನು ಮತ್ತು ಐಕಳ ಗ್ರಾಮದ ನೆಲ್ಲಿಗುಡ್ಡೆ ಕ್ರಾಸ್ ಎಂಬಲ್ಲಿ ಜಾಗಕ್ಕೆ ಅಳವಡಿಸಿರುವ 5 ಕಬ್ಬಿಣದ ಗೇಟ್ ಗಳನ್ನು ಯಾರೋ ಕಳ್ಳರು ಕಳವು ಮಾಡಿದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.
ಈ ಪ್ರಕರಣದ ಆರೋಪಿಗಳನ್ನು ಮುಲ್ಕಿ ಠಾಣಾ ಎ.ಎಸ್.ಐ. ಸಂಜೀವ ಎ.ಪಿ ಮತ್ತು ಸಿಬ್ಬಂದಿಗಳು ಜುಲೈ 07ರಂದು ದಸ್ತಗಿರಿ ಮಾಡಿದ್ದು ಆರೋಪಿಯಿಂದ ಪ್ರಕರಣದ ಕಳವಿಗೆ ಸಂಬಂಧಿಸಿದ ಒಟ್ಟು 39 ಬ್ಯಾಟರಿಗಳನ್ನು ಮತ್ತು ಕಬ್ಬಿಣದ ಕಂಪೌಂಡ್ ಗೇಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಆರೋಪಿಯಿಂದ ಮೊಬೈಲ್ ಟವರ್ ಗೆ ಸಂಬಂಧಿಸಿದ ಅಂದಾಜು 2,56,000 ರೂ. ಮೌಲ್ಯದ 39 ಬ್ಯಾಟರಿಗಳು, ಅಂದಾಜು 52,000 ರೂ. ಮೌಲ್ಯದ 3 ಕಬ್ಬಿಣದ ಗೇಟ್ ಗಳು, ಅಂದಾಜು 5,00,000 ರೂ. ಮೌಲ್ಯದ ಕಳವು ಸೊತ್ತುಗಳನ್ನು ಸಾಗಾಟ ಮಾಡಲು ಉಪಯೋಗಿಸಿದ ಪಿಕ್ ಅಪ್ ಗೂಡ್ಸ್ ಟೆಂಪೋವನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಈ ಮೂಲಕ ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 8,08,000 ರೂ. ಆಗಿರುತ್ತದೆ.
ಆರೋಪಿಯ ಪತ್ತೆ ಕಾರ್ಯವು ಮಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್, ಐ.ಪಿ.ಎಸ್ ರವರ ಮಾರ್ಗದರ್ಶನದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಮನೋಜ್ ಕುಮಾರ್ ಮತ್ತು ಮುಲ್ಕಿ ಶಾಣಾ ನಿರೀಕ್ಷಕರಾದ ವಿದ್ಯಾಧರ ಡಿ ಬಾಮ್ಮೇರಿಕರ್ ಮತ್ತು ಪಿ.ಎಸ್.ಐ. ವಿನಾಯಕ ಭಾವಿಕಟ್ಟಿ ರವರ ನೇತೃತ್ವದಲ್ಲಿ ನಡೆದಿದೆ. ಈ ಆರೋಪಿ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಎ.ಎಸ್.ಐ. ಸಂಜೀವ ಎ.ಪಿ, ಹೆಡ್ ಕಾನ್ ಸ್ಟೇಬಲ್ ಕಿಶೋರ್ ಕೋಟ್ಯಾನ್, ಮಹೇಶ್, ಶಶಿಧರ, ಚಂದ್ರಶೇಖರ್, ವಿಶ್ವನಾಥ, ವಿರೇಶ್ ಕಾನ್ ಸ್ಟೇಬಲ್ ಗಳಾದ ಅರುಣ್ ಕುಮಾರ್, ಸುನೀಲ್ ಮತ್ತು ಮ.ಪಿ.ಸಿ. ಚಿತ್ರಾ ರವರು ಸಹಕರಿಸಿರುತ್ತಾರೆ.