ಕಾರ್ಕಳ, ಜು.06(DaijiworldNews/AA): ಕಳೆದ ಕೆಲ ವರ್ಷಗಳಿಂದ ಮಳೆಗಾಲದ ಸಂದರ್ಭದಲ್ಲಿ ಮುಂಡ್ಲಿ ಡ್ಯಾಂ ಪರಿಸರದಲ್ಲಿ ಕೃತಕ ನೆರೆ ಸೃಷ್ಠಿಯಾಗಿ ಅಪಾರ ಕೃಷಿ ಹಾನಿಯಾಗುತ್ತಿತ್ತು. ಇದರಿಂದ ಕೃಷಿಕರ ಆರ್ಥಿಕ ನಷ್ಟ ಅನುಭವಿಸುತ್ತಾ ಬಂದಿದ್ದರು.
ಆದರೆ ಪ್ರಸಕ್ತ ಸಾಲಿನಲ್ಲಿ ಪುರಸಭೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮದಿಂದಾಗಿ ಮುಂಡ್ಲಿ ಪರಿಸರದಲ್ಲಿ ಕೃತಕ ನೆರೆಗೆ ಮುಕ್ತಿ ದೊರೆತ್ತಿದೆ. ಮುಂಡ್ಲಿ ಡ್ಯಾಂನಿoದ ಪ್ರಮುಖ ಮೂರು ಗೇಟ್ಗಳಲ್ಲಿ ಒಂದರ ತಳಭಾಗದ ತೆರೆದು ಕೊಂಡಿದೆ. ಅದರ ಬದಿಯಲ್ಲಿ ಹಿರಿದಾ ಗೇಟ್ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿದ್ದು, ಅದರಿಂದ ಹೊರ ಬರುವ ನೀರು ನೇರವಾಗಿ ಪಕ್ಕದಲ್ಲಿ ಸ್ಥಾಪಿಸಲಾಗಿರುವ ಜಲವಿದ್ಯುತ್ ಘಟಕಕ್ಕೆ ಹಾಯುತ್ತಿದ್ದು, ಅಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಸ್ವರ್ಣ ಉಗಮ...
ಪಶ್ಚಿಮಘಟ್ಟದಲ್ಲಿ ತಪ್ಪಲು ಪ್ರದೇಶದಿಂದ ಉಗಮವಾಗುವ ಸ್ವರ್ಣ ನದಿ ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ತು, ಹೇರಂಜೆ, ಕಲ್ಯಾಣಿ, ಎಡಪ್ಪಾಡಿ, ಹೊಯ್ಕೆಹಿತ್ತು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆಯನ್ನು ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ನಾಮಾಂಕಿತದೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತದೆ.
ಸ್ವರ್ಣ ನದಿಗೆ ಬಲ್ಮಗುಂಡಿ(ಮುಂಡ್ಲಿ)ಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಹಾಗೂ ಹಿರಿಯಡ್ಕ ಬಜೆ ಎಂಬಲ್ಲಿ ಕಿಂಡಿಅಣೆಕಟ್ಟು ನಿರ್ಮಿಸಿ ಉಡುಪಿ ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.