ಮಂಗಳೂರು, ಜು.06(DaijiworldNews/AA): ಸಿದ್ದರಾಮಯ್ಯ ಅವರು ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎಂ ರವಿ ಕುಮಾರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಮಾಜವಾದದಿಂದ ಬಂದವರು ನನಗೂ ಭ್ರಷ್ಟಾಚಾರಕ್ಕೂ ಸಾಸಿವೆಕಾಳಷ್ಟು ಸಂಬಂಧ ಇಲ್ಲ ಎಂದ ಅಂತಾ ಸಿದ್ದರಾಮಯ್ಯ ಸಮಾಜವಾದಕ್ಕೆ ತಿಲಂಜಲಿ ಇಟ್ಟು, ತನ್ನ ಪತ್ನಿಗೆ 14 ಸೈಟು ಮಾಡಿಕೊಡ್ತಾರೆ. 35 ಕೋಟಿ ಕೊಟ್ಟು 14 ಸೈಟು ತಗೋಳ್ತಾರೆ ಅಂದ್ರೆ ಅವರಿಗೆ ಯಾವ ನೈತಿಕತೆ ಇದೆ. ನೀವು ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ನಿಮ್ಮ ಸಮಾಜವಾದ ಆದರ್ಶ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದರು.
ಎಸ್ ಸಿ, ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಹಣ ಹೇಗೆ ಗ್ಯಾರಂಟಿಗೆ ಬಳಸುತ್ತೀರಾ? ಎಸ್ ಸಿ, ಎಸ್ಟಿ ಗಳಿಗೆ, ದಲಿತರಿಗೆ ಮಹಾ ದ್ರೋಹ ಮಾಡಿದ ಸಿಎಂ ಎಂದರೆ ಅದು ಸಿದ್ದರಾಮಯ್ಯ. ಬಹಳ ಬುದ್ಧಿವಂತರಾದ ಸಿದ್ದರಾಮಯ್ಯ, ಆರ್ಥಿಕ ತಜ್ಞ ಎಂದು ಹೇಳಿಕೊಳ್ಳೋ ಸಿದ್ದರಾಮಯ್ಯ, 4ರಿಂದ 5 ಲಕ್ಷ ಬೆಲೆ ಬಾಳೊ ಜಮೀನನ್ನ ನೀವು ಮೂಡಕ್ಕೆ ಕೊಟ್ಟು, ಈಗ 62 ಕೋಟಿ ರೂಪಾಯಿ ಕೇಳ್ತಾ ಇದ್ದಾರೆ. ಇಡೀ ರಾಜ್ಯದಲ್ಲಿ ಈ ಹಿಂದೆ ರೈತರು ಕಡಿಮೆ ಬೆಲೆಗೆ ಜಮೀನನ ಕೊಟ್ಟಿದ್ದಾರೆ. ಈಗ ಅದು ಕೋಟ್ಯಂತರ ಮೌಲ್ಯದ ಫ್ಲಾಟ್ ಸೈಟ್ ಆಗಿ ಪರಿವರ್ತನೆಯಾಗಿದೆ. ಈಗ ಆ ಎಲ್ಲಾ ರೈತರು ಕೇಳಿದ್ರೆ ಕೋಟಿ ಕೊಡ್ತೀರಾ? ಎಂದು ಕಿಡಿಕಾರಿದ್ದಾರೆ.
ನೀವು ಭ್ರಷ್ಟ ಮುಖ್ಯಮಂತ್ರಿಯಾಗಿದ್ದೀರಿ, ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನ ಬೇರೆ ರಾಜ್ಯದ ಚುನಾವಣೆಗೆ ಬಳಸಿಕೊಂಡಿದ್ದೀರಿ. 700 ಅಕೌಂಟ್ ಗಳಿಗೆ ಹಣ ಸಂದಾಯ ಮಾಡಿ ಡ್ರಾ ಮಾಡಿಸಿದ್ದೀರಿ. ವಾಲ್ಮೀಕಿ ನಿಗಮದ ಹಗರಣದ ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ಕೊಟ್ರು. ನೀವು ಈಗ ಸೈಟ್ ಗಳಲ್ಲಿ ಭ್ರಷ್ಟಾಚಾರ ಮಾಡಿದ್ದೀರ. ನೀವು ರಾಜೀನಾಮೆ ಕೊಟ್ಟು ಮಾತನಾಡಿ ಎಂದು ಸವಾಲು ಹಾಕಿದರು.
ಇನ್ನು ಮೂಡ ಹಗರಣ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರು ವಿಶೇಷ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದಾರೆ ಎಂದರು.