ಸುಳ್ಯ, ಜು.06(DaijiworldNews/AA): ಆಸ್ಪತ್ರೆಯಲ್ಲಿ ವಿಶೇಷ ತಜ್ಞರ ನೇಮಕಕ್ಕೆ ಸರಕಾರ ಅನುಮತಿ ನೀಡಿದೆ. ಆದರೆ ದೂರ ಇರುವ ತಾಲೂಕುಗಳಿಗೆ ಬರಲು ಹಲವು ಮಂದಿ ಹಿಂದೇಟು ಹಾಕುತ್ತಿರುವುದರಿಂದ ಹಿನ್ನಡೆ ಆಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸುಳ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಮುಂದಿನ ತಿಂಗಳು ಆಗಸ್ಟ್, ಸೆಪ್ಟೆಂಬರ್ ನಲ್ಲಿ ಪೋಸ್ಟ್ ಗ್ರಾಜುಯೇಷನ್ ಪೂರ್ಣಗೊಳ್ಳಲಿರುವವರಿಗೆ, ಅವರನ್ನು ಬಳಸಿಕೊಂಡು ಕಡ್ಡಾಯವಾಗಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ತಿಳಿಸಿದರು.
5-6 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಯಾವುದೇ ನೇಮಕಾತಿ ಮಾಡಿಲ್ಲ. ಈ ಹಿಂದಿನ ಸರಕಾರ ಕೂಡ ಯಾವುದೇ ನೇಮಕಾತಿ ನಡೆಸಿಲ್ಲ. ನಾವು ಈಗಾಗಲೇ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಹುದ್ದೆ ಭರ್ತಿ ಆಗುವವರೆಗೆ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗುವುದು. ಇಂದು ಅನೇಕ ಕಡೆಗಳಲ್ಲಿ ಹೆಚ್ಚಾಗಿ ತಜ್ಞವೈದ್ಯರ ಕೊರತೆ ಇದೆ. ಅದನ್ನು ನೀಗಿಸುವಲ್ಲಿ ಕ್ರಮ ಕೈಗೊಳ್ಳಲಿದ್ದೇವೆ ಎಂದರು.
ಕಳೆದ ಐದಾರು ವರ್ಷಗಳಿಂದ ಯಾವುದೇ ನೇಮಕಾತಿ ಮಾಡಿಕೊಳ್ಳದೇ ಇಂದು ಎಲ್ಲಾ ಕಡೆಗಳಲ್ಲಿ ಹುದ್ದೆಗಳು ಖಾಲಿಯಾಗಿವೆ. ಇಂದು ನಾವು ಅರೆವಳಿಕೆ ಸಿಬ್ಬಂದಿ, ಟೆಕ್ನಿಷಿಯನ್ಸ್ ಗಳನ್ನು ನೇಮಕಾತಿ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.