ಮಂಗಳೂರು, ಜು.06(DaijiworldNews/AA): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಯಾವುದೇ ಅನಾಹುತ ಸಂಭವಿಸದಂತೆ ಮಳೆಗಾಲ ಮುಗಿಯುವವರೆಗೆ ಟ್ರೆಕ್ಕಿಂಗ್ ನಿಷೇಧಿಸಿ ಮತ್ತು ಜಿಲ್ಲೆಯ ಜಲ ಪ್ರದೇಶಗಳಲ್ಲೂ ಅನಧಿಕೃತ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಈ ಸಂಬಂಧ ಯಾವುದೇ ಅನಾಹುತಗಳು ಸಂಭವಿಸದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗೃತಾ ಕ್ರಮ ವಹಿಸಬೇಕಾಗಿರುತ್ತದೆ. ಜಿಲ್ಲೆಯಲ್ಲಿ ಸಾರ್ವಜನಿಕರು/ಪ್ರವಾಸಿಗರು ವಿವಿಧ ಗಿರಿತಾಣಗಳಿಗೆ ಚಾರಣಕ್ಕಾಗಿ ತಂಡೋಪ ತಂಡವಾಗಿ ಭೇಟಿ ನೀಡುವುದು, ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಜಿಲ್ಲಾಡಳಿತ ಗಮನಕ್ಕೆ ಬಂದಿರುತ್ತದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕಾಗಿರುವುದರಿಂದ ಹಾಗೂ ಜಿಲ್ಲೆಯಾದ್ಯಂತ ಪ್ರಾಕೃತಿಕ ವಿಕೋಪದ ಘಟನೆಗಳು ಸಂಭವಿಸುತ್ತಿರುತ್ತವೆ. ಜಿಲ್ಲೆಯ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನಿಸಿ ಸೂಕ್ತ ಸುರಕ್ಷತಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳ ಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಭಾರಿ ಮಳೆಯಿಂದ ಭೂಕುಸಿತ, ಗುಡ್ಡ ಕುಸಿತ, ಮರ ಬೀಳುವ ಸಾಧ್ಯತೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ದ.ಕ. ಜಿಲ್ಲೆಯ ಶಿಖರಗಳ ಟ್ರೆಕ್ಕಿಂಗ್, ಸಾಹಸ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ. ಜಲಪಾತ, ಝರಿ, ನದಿ, ಸಮುದ್ರ, ಜಲಾಶಯದ ಪ್ರದೇಶಗಳಲ್ಲೂ ನಿರ್ಬಂಧಿಸಿಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರು ಜಿಲ್ಲಾಡಳಿತದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಮತ್ತು ಮುಂದಿನ ಸೂಚನೆ ಬರುವವರೆಗೆ ಅಪಾಯಕಾರಿ ಪ್ರದೇಶಗಳಿಗೆ ತೆರಳಬಾರದು. ಈ ನಿರ್ಬಂಧಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.