ಕಾಸರಗೋಡು, ಜು.06(DaijiworldNews/AA): ನಾಗರ ಹಾವು ಕಡಿತಕ್ಕೊಳಗಾಗಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಬುಧವಾರ ಕಾಸರಗೋಡಿನ ಪೈವಳಿಕೆಯಲ್ಲಿ ನಡೆದಿದ್ದು, ಮೃತರ ಅಂತ್ಯಸಂಸ್ಕಾರದ ವಿಧಿಯ ಕೊನೆಯ ಭಾಗವಾದ ನೀರು ಇಡುವ ಕಾರ್ಯಕ್ರಮ ಗುರುವಾರ ರಾತ್ರಿ ನಡೆದಿತ್ತು. ವಿಸ್ಮಯವೆಂದರೆ ಈ ಕಾರ್ಯಕ್ರಮಕ್ಕೆ ಆಗಮಿಸಿದ ನಾಗರ ಹಾವು ಪಾತ್ರೆದಲ್ಲಿದ್ದ ನೀರನ್ನು ಕುಡಿದು ತೆರಳಿದೆ ಎಂದು ಹೇಳಲಾಗುತ್ತಿದೆ.
ಪೈವಳಿಕೆ ಪಂಚಾಯತ್ ಗೊಳಪಟ್ಟ ಕುರುಡುಪದವು ನಿವಾಸಿ ಚೋಮು (62) ಎಂಬವರು ಹಾವು ಕಡಿತಕ್ಕೊಳಗಾಗಿ ಜುಲೈ 3ರ ರಾತ್ರಿ ಸಾವನ್ನಪ್ಪಿದ್ದರು. ಅವರ ಅಂತ್ಯಸಂಸ್ಕಾರದ ವಿಧಿ ಜುಲೈ 4ರಂದು ಗುರುವಾರ ಸಂಜೆ ನಡೆದಿತ್ತು. ಅಂದು ರಾತ್ರಿ ಮನೆ ಚಾವಡಿಯಲ್ಲಿ ನೀರು ಇಡುವ ಸಂಪ್ರದಾಯ ನಡೆದಿತ್ತು. ಮನೆ ಚಾವಡಿಯಲ್ಲಿ ಬೂದಿ ಹರಡಿ ಅದರ ನಡುವಿನಲ್ಲಿ ಪಾತ್ರವೊಂದರಲ್ಲಿ ನೀರು ಇಡಲಾಗಿತ್ತು. ಮನೆ ಹಿಂಬದಿ ಬಾಗಿಲು ಭದ್ರ ಪಡಿಸಲಾಗಿತ್ತು. ಮುಂಬಾಗಿಲಿನಲ್ಲಿ ನಾಲ್ಕು ಮಂದಿ ಜನ ಮಲಗಿದ್ದರು.
ನಿನ್ನೆ ಬೆಳಗ್ಗೆ ನೋಡಿದಾಗ ಪಾತ್ರೆಯಲ್ಲಿ ನೀರು ಖಾಲಿಯಾಗಿರುವುದು ಬೆಳಕಿಗೆ ಬಂದಿದ್ದು, ನಾಗರ ಹಾವು ಬಂದು ಪಾತ್ರದಲ್ಲಿದ್ದ ನೀರನ್ನು ಕುಡಿದು ತೆರಳಿರಬಹುದೆಂಬ ನಂಬಿಕೆ ಮನೆಯವರದ್ದಾಗಿದೆ. ಹಾವು ಬಂದಿರುವುದಕ್ಕೆ ಸಾಕ್ಷಿ ಎಂಬಂತೆ ಬೂದಿ ಮೇಲೆ ಹರಡಿರುವ ಹಾವಿನ ಗುರುತನ್ನು ಮನೆಯವರು ತೋರಿಸಿದ್ದು, ಅಚ್ಚರಿ ಮೂಡಿಸಿದೆ. ಇನ್ನು ಇದಕ್ಕೂ ಮಿಗಿಲಾದ ವಿಷಯವೇನೆಂದರೆ, ಚೋಮು ಅವರ ಸಾವಿಗೆ ಕಾರಣವಾದ ನಾಗರ ಹಾವನ್ನು ಹಾವು ಹಿಡಿಯುವವರು ಬಂದು ಹಿಡಿದು ಅರಣ್ಯಕ್ಕೆ ಕೊಂಡೊಯ್ದು ಬಿಟ್ಟಿದ್ದರು. ಹಾಗಾದರೆ ನೀರು ಕುಡಿಯಲು ಬಂದ ಹಾವು ಯಾವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ನಾಗಾರಾಧನೆಯ ಕೇಂದ್ರವಾದ ತುಳುನಾಡಿನಲ್ಲಿ ಇದಕ್ಕೆ ಸಂಬಂಧಿಸಿದ ಕಾರಣೀಕತೆಗಳು ನಡೆಯುತ್ತಲೇ ಇದೆ. ಇದೀಗ ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ಈ ಘಟನೆ ನಡೆದಿದೆ.