ಪುತ್ತೂರು, ಜು.06(DaijiworldNews/AA): ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿದೆ. ಇದೇ ಅವಧಿಯಲ್ಲಿ ಪುತ್ತೂರು ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳ ಸಂಖ್ಯೆಗಳಲ್ಲಿ ಏರಿಕೆಯಾಗಿದೆ.
ಈ ವರ್ಷದ ಜನವರಿಯಿಂದ ಜು.5ರ ತನಕ ಒಟ್ಟು 177 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ 10 ಮಂದಿಗೆ ಡೆಂಗ್ಯೂ ಖಚಿತ ಪಟ್ಟಿದೆ. ಈ ಪೈಕಿ ಪುತ್ತೂರು ನಗರ, ತಿಂಗಳಾಡಿ, ಉಪ್ಪಿನಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಹೆಚ್ಚು ಶಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನಲ್ಲಿ 2021ರಲ್ಲಿ 21, 2022ರಲ್ಲಿ 7 ಹಾಗೂ 2023ರಲ್ಲಿ 5 ಡೆಂಗ್ಯೂ ಪ್ರಕರಣ ಧೃಡಪಟ್ಟಿತ್ತು.
ಜ್ವರ ಪೀಡಿತ ಹೆಚ್ಚಿನವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಆದರೆ ಇಲ್ಲಿ ದಾಖಲಾದವರ ವಿವರಗಳು ತಾಲೂಕು ಆಸ್ಪತ್ರೆಗೆ ನಿಖರವಾಗಿ ಸಲ್ಲಿಕೆಯಾಗದ ಕಾರಣ ಡೆಂಗ್ಯೂ ಬಾಧಿತರ ಸಮರ್ಪಕ ಅಂಕಿಅಂಶ ದೊರೆಯುತ್ತಿಲ್ಲ. 6 ತಿಂಗಳಿನಲ್ಲಿ ಖಾಸಗಿ, ಸರಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಸಂಬಂಧಿಸಿ ದಾಖಲಾದವರ ಸಂಖ್ಯೆ 500ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಮೂರು ವರ್ಷಗಳಿಂದ ಡೆಂಗ್ಯೂ ಇಳಿಮುಖದತ್ತ ಸಾಗುತ್ತಿದ್ದರೂ ಈ ವರ್ಷ ಜುಲಾಯಿ ಮುಗಿಯುವ ಮೊದಲೇ 7 ಡೆಂಗ್ಯೂ ಪ್ರಕರಣ ದೃಢಪಟ್ಟಿದ್ದು, ಹಿಂದಿನೆರಡು ವರ್ಷಗಳಿಗಿಂತ ಈ ವರ್ಷ ರೋಗ ತೀವ್ರ ತೆಯ ಪ್ರಮಾಣ ಹೆಚ್ಚಾಗುತ್ತಿರುವುದನ್ನು ಆರು ತಿಂಗಳ ಅಂಕಿಅಂಶ ದೃಢಪಡಿಸಿದೆ. ತಾಲೂಕು ಆಸ್ಪತ್ರೆಗೆ ಪ್ರತಿದಿನ ಜ್ವರಬಾಧೆಯಿಂದ ಬರುತ್ತಿರುವವರ ಸಂಖ್ಯೆ 50ರಿಂದ 60ಕ್ಕೆ ಏರಿಕೆ ಕಂಡಿದೆ.
100 ಬೆಡ್ ಸೌಲಭ್ಯ ಇರುವ ತಾಲೂಕು ಆಸ್ಪತ್ರೆಯಲ್ಲಿ ಜನರಲ್ ವಾರ್ಡ್ ಒಂದೇ ಇರುವ ಕಾರಣ ಡೆಂಗ್ಯೂ ಪೀಡಿತರಿಗೆ ಪ್ರತ್ಯೇಕ ವಾರ್ಡ್ ತೆರೆದಿಲ್ಲ. ಅವರಿಗೆ ಉಳಿದ ಜ್ವರ ಪೀಡಿತರಂತೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಶಂಕಿತ ಡೆಂಗ್ಯೂ ಪ್ರಕರಣದಡಿ ದಿನಂಪ್ರತಿ ದಾಖಲಾಗುತ್ತಿರುವವರ ಸಂಖ್ಯೆ 5 ರಿಂದ 6ರಷ್ಟಿದೆ.