ಮಂಗಳೂರು/ಉಡುಪಿ, ಮೇ15(Daijiworld News/SS): ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೃಷಿ ಮತ್ತು ತೋಟದ ಬೆಳೆಗಳು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿವೆ. ಒಂದೆಡೆ ಬಿಸಿಲು, ಇನ್ನೊಂದೆಡೆ ನೀರಿನ ಸಮಸ್ಯೆ ತಲೆದೋರಿರುವುದರಿಂದ ಕರಾವಳಿಯಲ್ಲಿ ಅಡಕೆ ಹಾಗೂ ಕಾಯಿ ಕಟ್ಟುವ ತೆಂಗು ಮತ್ತು ಬಾಳೆ, ಕಾಳುಮೆಣಸು ಬೆಳೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ.
ಕರಾವಳಿಯಲ್ಲಿರುವ ಜೀವ ನದಿಗಳು ಸೇರಿದಂತೆ ಕೆರೆ, ಕಾಲುವೆ, ಬಾವಿಯ ನೀರು ಬತ್ತಿ ಕುಡಿಯುವ ನೀರಿಗೂ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಈ ಬೇಸಿಗೆಯ ನೇರ ಬಿಸಿ ರೈತಾಪಿ ವರ್ಗಕ್ಕೆ ತಟ್ಟಿದೆ.
ಉಡುಪಿ ಜಿಲ್ಲೆಯಲ್ಲಿ 20 ಸಾವಿರ ಹೆಕ್ಟೇರ್ ಅಡಕೆ, 19 ಸಾವಿರ ಹೆಕ್ಟೇರ್ ತೆಂಗು, 17 ಸಾವಿರ ಹೆಕ್ಟೇರ್ ಗೇರು, 1400 ಹೆಕ್ಟೇರ್ ತರಕಾರಿ, 1500 ಹೆಕ್ಟೇರ್ ಬಾಳೆ ಕೃಷಿ ಇದೆ. ಆದರೆ ಈ ಬಾರಿ ಹೆಚ್ಚಿನ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ.
ಏರುತ್ತಲೇ ಇರುವ ಬಿಸಲಿನಿಂದ ಕರಾವಳಿಯಲ್ಲಿ ನೀರಿನ ಕೊರತೆ ಉಂಟಾಗಿದೆ. ಪರಿಣಾಮ ತೆಂಗು ಸೇರಿದಂತೆ ಅಡಕೆ ಕೃಷಿಯಲ್ಲಿ ಇಳುವರಿ ಕುಂಠಿತವಾಗಲಿದೆ. ವಿಪರ್ಯಾಸವೆಂದರೆ ಕೆಲವೆಡೆ ಅಡಕೆ, ತೆಂಗಿನ ತೋಟ ಜೀವಕಳೆ ಕಳೆದುಕೊಂಡಿವೆ. ಪರಿಣಾಮ ರೈತ ಸಂಕಷ್ಟಕ್ಕೆ ತುತ್ತಾಗಿದ್ದಾನೆ.
ಪ್ರತಿದಿನ ತಲಾ ಒಂದು ಅಡಕೆ ಮರಕ್ಕೆ 25ರಿಂದ 30 ಲೀಟರ್ ಹಾಗೂ ತೆಂಗಿಗೆ 40ರಿಂದ 45 ಲೀಟರ್ ನೀರಿನ ಅವಶ್ಯವಿದೆ. ಆದರೆ ಈ ಬಾರಿ ಹೆಚ್ಚಿನ ತೋಟಗಳಿಗೆ ನೀರು ಹಾಯಿಸುವುದನ್ನೇ ರೈತರು ಕೈ ಬಿಟ್ಟಿದ್ದಾರೆ. ಕೊಳವೆ ಬಾವಿ ಸಹಿತ ಬೇರೆ ನೀರಿನ ಮೂಲ ಇರುವ ಕಡೆಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಬೆಳೆಗೆ ಸಿಗುತ್ತಿದೆ. ಆದರೆ ಈ ನೀರು ತೋಟಗಳಿಗೆ ಸಾಕಾಗುತ್ತಿಲ್ಲ ಎನ್ನುವುದು ರೈತನ ನೋವು.
ಸುಡುತ್ತಿರುವ ಬಿಸಿಲಿಗೆ ತೆಂಗು, ಅಡಕೆಯ ರೆಂಬೆಗಳು ಸುಟ್ಟು ಹೋಗಲಾರಂಭಿಸಿದ್ದು, ಕೆಲವು ಕಡೆಗಳಲ್ಲಿ ಕಾಯಿ ಒಡೆಯುತ್ತಿವೆ. ಮಾತ್ರವಲ್ಲ, ಅವಧಿಗೂ ಮುನ್ನ ಕಂಗು - ತೆಂಗಿನಿಂದ ಕಾಯಿಗಳು ಬೀಳುತ್ತಿವೆ.