ಬಂಟ್ವಾಳ, ಮೇ 15 (Daijiworld News/SM): ಬಂಟ್ವಾಳ ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್ ಗಳು ಅಭಿವೃದ್ದಿಯಲ್ಲಿ ಹಿಂದೆ ಉಳಿದಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪಿಡಿಒ, ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಈ ಸಭೆಯಲ್ಲಿ ಸಿಇಒ ಡಾ. ಸೆಲ್ವಮಣಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಲೂಕಿನ ಗ್ರಾಮ ಪಂಚಾಯತ್ ಗಳಿಗೆ ನೀಡಿದ ವಾರ್ಷಿಕ ಶೇಕಡಾವಾರು ಗುರಿಯನ್ನು ತಲುಪದೆ ಇರುವ ಬಗ್ಗೆ ಡಾ. ಸೆಲ್ವಮಣಿ ಗರಂ ಆಗಿದ್ದಾರೆ. ಅಲ್ಲದೆ, ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿ ರಾಜಣ್ಣ ಅವರ ಮೇಲೆ ಕ್ರಮಕೈಗೊಳ್ಳವ ಬಗ್ಗೆ ಎಚ್ಚರಿಕೆ ನೀಡಿದರು.
ಮೇ ತಿಂಗಳ ಅಂತ್ಯದವರೆಗೂ ಕಾಮಗಾರಿ ಪೂರ್ಣಗೊಳಿಸದೆ ಮಳೆ ಬರುವ ಜೂನ್ ತಿಂಗಳಲ್ಲಿ ಕಾಮಗಾರಿ ಹೇಗೆ ಪೂರ್ಣಗೊಳಿಸುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಎಲ್ಲಾ ಗ್ರಾಮ ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿಗಳ ಪೈಕಿ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ ಕಾಮಾಗಾರಿಗಳು ಮಾತ್ರ ಬಾಕಿ ಉಳಿದಿರುವುದು ಮೇಲ್ನೋಟಕ್ಕೆ ಗಮನಕ್ಕೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯತ್ ಪಿಡಿಒಗಳು ತಾಂತ್ರಿಕ ಸಮಸ್ಯೆಯ ಬಗ್ಗೆ ದೂರು ಮುಂದಿಟ್ಟಾಗ, ದ.ಕ. ಜಿಲ್ಲೆಯ ಪ್ರತಿ ಗ್ರಾ.ಪಂ. ತಂತ್ರಜ್ಞಾನದಲ್ಲಿ ಮುಂದುವರಿದಿದ್ದು ನೀವೂ ಅಭಿವೃದ್ಧಿ ಕಾರ್ಯದಲ್ಲಿ ಹಿಂದುಳಿದಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.