ಮಂಗಳೂರು, ಮೇ15(Daijiworld News/SS): ಚೇಳಾಯಿರು ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ನದಿಯಲ್ಲಿ ಮೀನು ಹಿಡಿಯುವ ಉತ್ಸವ ನಡೆದಿದೆ.
ನಗರದ ಹೊರವಲಯದಲ್ಲಿರುವ ಸುರತ್ಕಲ್ ಸಮೀಪದ ಚೇಳಾಯಿರು ಖಂಡಿಗೆಯ ನಂದಿನಿ ನದಿಯಲ್ಲಿ ಪ್ರತಿವರ್ಷ ವೃಷಭ ಸಂಕ್ರಮಣದ ದಿನದಂದು ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಮೀನು ಹಿಡಿಯುವ ಉತ್ಸವ ನಡೆಯುತ್ತದೆ. ಈ ಬಾರಿಯೂ ಚೇಳಾಯಿರು ಖಂಡಿಗೆಯ ನಂದಿನಿ ನದಿಯಲ್ಲಿ ಈ ಮೀನು ಹಿಡಿವ ಉತ್ಸವ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ.
ಚೇಳಾಯಿರು ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ ದೈವಗಳಿಗೆ ಅಗೇಲು ಬಡಿಸಿದ ಬಳಿಕ ನಾಡಿನಲ್ಲೇ ತಯಾರಾಗುವ ಒಂದು ಬಗೆಯ ದೇಸಿ ಪಟಾಕಿಯನ್ನು ಬಹಳ ವೈಭವದಿಂದ ಸಿಡಿಸಲಾಗುತ್ತದೆ. ಪಟಾಕಿ ಸಿಡಿಸದ ಕೂಡಲೇ ಈ ಘಳಿಗೆಗೆ ಕಾದಿರುವ ಸಾವಿರಾರು ಜನರು ಜಾತಿ ಭೇದವಿಲ್ಲದೆ ನದಿಗೆ ಇಳಿದು, ಮೀನು ಹಿಡಿಯುವ ಉತ್ಸವದಲ್ಲಿ ಭಾಗಿಯಾಗುತ್ತಾರೆ.
ವೃಷಭ ಸಂಕ್ರಮಣಕ್ಕೆ ಒಂದು ತಿಂಗಳು ಮೊದಲು ಈ ನದಿಯಿಂದ ಮೀನು ಹಿಡಿಯುವುದನ್ನು ನಿಷೇಧಿಸಲಾಗುತ್ತದೆ. ಚೇಳಾಯಿರು ಖಂಡಿಗೆಯ ನಂದಿನಿ ನದಿಯಲ್ಲಿ ಹಿಡಿದ ಮೀನನ್ನು ಕೆಲವರು ಪ್ರಸಾದವೆಂಬಂತೆ ಮನೆಗೆ ಕೊಂಡೊಯ್ದರೆ, ಇನ್ನು ಕೆಲವರು ಹೆಚ್ಚಿನ ಬೆಲೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.