ಕುಂದಾಪುರ, ಮೇ15(Daijiworld News/SS): ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ವಿಪರ್ಯಾಸವೆಂದರೆ, ದೇವಾಲಯದಲ್ಲಿ 1 ವಾರಕ್ಕಾಗುವಷ್ಟು ನೀರಿನ ಮೂಲ ಲಭ್ಯವಿದ್ದು, ಮುಂದೆ ಪರ್ಯಾಯ ವ್ಯವಸ್ಥೆಯ ಅನಿವಾರ್ಯ ಇದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.
ಶ್ರೀ ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ದೇವರ ಪೂಜಾ ಕೈಂಕರ್ಯಕ್ಕೆ ಮೀಸಲಾಗಿರುವ 2 ತೀರ್ಥಬಾವಿಗಳಲ್ಲಿ ನೀರಿನ ಕೊರತೆ ಎದುರಾಗಿಲ್ಲ. ಆದರೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ನೀರಿನ ಕೊರತೆ ಎದುರಾಗಿದೆ. ಕ್ಷೇತ್ರದ ಎದುರಿನಲ್ಲಿ ತುಂಬಿ ಹರಿಯುತ್ತಿದ್ದ ಅಗ್ನಿತೀರ್ಥ ಹೊಳೆ ಬರಿದಾಗಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ ಬೋರ್ವೆಲ್ಗಳಿಂದ ನೀರು ಚಿಮ್ಮದೆ ಇರುವುದರಿಂದ ನೀರಿನ ಪರ್ಯಾಯ ವ್ಯವಸ್ಥೆ ಆರಂಭಿಸಲಾಗಿದೆ. ದೇವಳದ 3 ವಸತಿಗೃಹಗಳ ಸಹಿತ, ಭೋಜನ ವ್ಯವಸ್ಥೆಗೆ ನೀರು ಪೂರೈಕೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಶ್ರೀ ಕೊಲ್ಲೂರು ಶ್ರೀಮೂಕಾಂಬಿಕಾ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿರ್ದೇಶನದಂತೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ನಡೆಸಲಾಗುತ್ತಿದೆ. ದೇವಳದ ಸೌಪರ್ಣಿಕಾ ಸ್ನಾನಘಟ್ಟದಲ್ಲಿನ ಗುಂಡಿಯಲ್ಲಿ ಭಕ್ತರ ಪುಣ್ಯಸ್ನಾನಕ್ಕಾಗುವಷ್ಟು ನೀರಿದ್ದು, ಕೆಲವೇ ದಿನಕ್ಕೆ ಸೀಮಿತವಾಗಿದೆ.
ಒಂದು ವೇಳೆ ಶೀಘ್ರದಲ್ಲಿ ಮಳೆ ಸುರಿದರೆ ಸಮಸ್ಯೆ ಪರಿಹಾರ ಆಗಲಿದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಹೇಳಿದ್ದಾರೆ.