ಮಂಗಳೂರು, ಮೇ 15 (Daijiworld News/MSP): ಇಲ್ಲಿನ ಗುಡ್ಡೆಕೊಪ್ಲ ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್ ಹಾಗೂ ಕಡಲಾಮೆ, ಮತ್ತು ಸಮೀಪದ ಹೊಸಬೆಟ್ಟುವಿನಲ್ಲಿಯೂ ಕಡಲಾಮೆಯ ಕಳೇಬರ ಮಂಗಳವಾರ ಪತ್ತೆಯಾಗಿ ಮೀನುಗಾರರ ಹಾಗೂ ಪರಿಸರಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.
ಈ ಜಲಚರಗಳು ಮೃತಪಟ್ಟು ಎರಡು-ಮೂರು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಡಲಾಮೆಗಳು ನೂರಾರು ವರ್ಷ ಬಾಳುವ ಅಪರೂಪದ ಸಮುದ್ರಜೀವಿ. ಇವುಗಳ ಸಂತತಿ ಈಗಾಗಲೇ ವಿನಾಶದತ್ತ ತಲುಪಿದೆ. ಕಡಲಾಮೆಯ ಸಾವಿಗೆ ಸಮುದ್ರಕ್ಕೆ ಉಧ್ಯಮಗಳ ಬಿಸಿ ನೀರು ವಿಸರ್ಜನೆಯ್ರ್ ಕಾರಣ ಎಂದು ಶಂಕಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ, ಸಮುದ್ರ ತೀರದಲ್ಲಿ ತೈಲದ ಅಂಶ ಹಾಗೂ ಡಾಂಬರಿನ ಉಂಡೆಗಳು ಸಂಗ್ರಹವಾಗುತ್ತಿರುವುದು ಸುದ್ದಿಯಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತಳೆದಿದ್ದರು. ಇದೀಗ ಈ ರೀತಿ ಬೃಹತ್ ಜಲಚರಗಳ ಸಾವು ಕೂಡಾ ಮೀನುಗಾರರಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈಗ ಸಮುದ್ರ ಜೀವಿಗಳ ಸಾವಿನ ಕುರಿತಂತೆ ತನಿಖೆ ಅಥವಾ ಅಧ್ಯಯನವನ್ನು ನಡೆಸಲು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ತಳೆದಂತೆ ತೋರುತ್ತಿದೆ.