ಕುಂದಾಪುರ,ಮೇ 15 (Daijiworld News/MSP): ಪ್ರಶಸ್ತಿಗಳೆಂದರೆ ಸಾಹಿತ್ಯ, ಕಲೆ, ಕ್ರೀಡೆ, ಸಮಾಜಸೇವೆಯಲ್ಲಿ ಸಾಧನೆ ಮಾಡಿದವರಿಗೆ ನೀಡುವುದು ಸ್ವಾಭಾವಿಕ. ಆದರೆ ಕುಂದಾಪುರ ತಾಲೂಕು ಪಡುಕೊಣೆಯಲ್ಲಿ ಅಪರೂಪದ ಕಾರ್ಯಕ್ರಮವೊಂದು ಕಳೆದೆರಡು ವರ್ಷಗಳಿಂದ ನಡೆಯುತ್ತಿದೆ.
ಪಡುಕೋಣೆ ನಿವಾಸಿ, ಕಠಿಣ ಪರಿಶ್ರಮಿ ನಾರಾಯಣ ಅವರು ಸುದೀರ್ಘ ಕಾಲ ಶ್ರಮಜೀವಿಯಾಗಿ ಬದುಕಿ ಇತರರಿಗೆ ಮಾದರಿಯಾದವರು. ಅವರ ನಿಧನದ ಬಳಿಕ ಅವರ ಹೆಸರಲ್ಲಿ ಶ್ರಮಜೀವಿಯೊಬ್ಬರನ್ನು ಆಯ್ಕೆ ಮಾಡಿ ಪ್ರತೀವರ್ಷ ಅವರ ಪುಣ್ಯತಿಥಿಯಂದು ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ನೀಡುವ ಸಂಪ್ರದಾಯವೊಂದನ್ನು ನಾರಾಯಣ ಪಡುಕೋಣೆ ಅವರ ಮಕ್ಕಳು ಆರಂಭಿಸಿದರು. ಇಲ್ಲಿ ಶ್ರಮಜೀವಿಯಾಗಿ ಕೆಲಸ ಮಾಡಿದರಿಗೆ ಪ್ರಶಸ್ತಿ ನೀಡಲಾಗುತ್ತದೆ. ಗೃಹನಿರ್ಮಾಣ ಕಾರ್ಯದಲ್ಲಿ ಶ್ರಮಿಸುವ ಬಡಗಿ ವೃತ್ತಿ ನಿರತರಿಗೆ ಕಳೆದ ಸಾಲಿನಲ್ಲಿ ನಾರಾಯಣ ಶ್ರಮಶಕ್ತಿ ಪ್ರಶಸ್ತಿ ನೀಡಲಾಗಿದೆ. ಈ ಬಾರಿ 40 ವರ್ಷಗಳಿಂದ ಕಟ್ಟಿಗೆ ಒಡೆಯುವ ಕೆಲಸ ಮಾಡಿರುವ ಶ್ರಮಜೀವಿ ಪಡುಕೋಣೆ ಭಂಡಾರಮನೆ ನಾಣು ಯಾನೆ ನಾರಾಯಣ ನಾಯ್ಕರಿಗೆ ನಾರಾಯಣ ಶ್ರಮಶಕ್ತಿ ಪ್ರಶಸ್ತಿ-೨೦೧೯ನ್ನು ನೀಡಿ ಗೌರವಿಸಲಾಯಿತು.
ಪಡುಕೋಣೆ ಹಕ್ಕಿಗೂಡು ವಠಾರದಲ್ಲಿ ನಡೆದ ನಾರಾಯಣ ಶ್ರಮಶಕ್ತಿ ಪ್ರಶಸ್ತಿ ಪ್ರಶಸಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ಉಪನ್ಯಾಸಕ, ಹಿರಿಯ ಪತ್ರಕರ್ತ ಎಸ್.ಜನಾರ್ದನ ಮರವಂತೆ ಮಾತನಾಡಿ, ಶ್ರಮಜೀವಿಯಾಗಿ ಸಾರ್ಥಕ ಬದುಕು ರೂಪಿಸಿಕೊಂಡು ಕುಟುಂಬವನ್ನು ಉನ್ನತಿಗೆ ಒಯ್ದಿದ್ದ ಪಡುಕೋಣೆ ನಾರಾಯಣ ಅವರ ಪುಣ್ಯತಿಥಿಯಂದು ಅವರಂತೆ ಬದುಕಿದ್ದ ಒಬ್ಬರನ್ನು ಗುರುತಿಸಿ ಅವರಿಗೆ ಶ್ರಮಶಕ್ತಿ ಪ್ರಶಸ್ತಿ ನೀಡುತ್ತಿರುವುದು ಒಂದು ಅಪೂರ್ವದ ಮತ್ತು ಶ್ಲಾಘನೀಯ ಉಪಕ್ರಮ ಎಂದು ನಿವೃತ್ತ ಉಪನ್ಯಾಸಕ, ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಹೇಳಿದರು.
ನಾರಾಯಣ ಅವರು ವರ್ಷದ ಎಲ್ಲ ಕಾಲಗಳಲ್ಲೂ ಕಾಯಕವನ್ನು ಧಾರ್ಮಿಕ ಶ್ರದ್ಧೆಯಂತೆ ನಡೆಸಿದವರು. ತಮ್ಮ ಕೊನೆಗಾಲದ ವರೆಗೂ ಆರೋಗ್ಯಯುತ ಜೀವನ ನಡೆಸಿ ಕುಟುಂಬದ ಕಿರಿಯರಿಗೆ ಮೌಲ್ಯಾಧರಿತ ಜೀವನಪಥವನ್ನು ತೋರಿದವರು. ಅವರ ವಾರ್ಷಿಕ ಸ್ಮರಣೆಯನ್ನು ಕಳೆದ ವರ್ಷದಂತೆ ಈ ವರ್ಷವೂ ’ಶ್ರಮಶಕ್ತಿ ಪ್ರಶಸ್ತಿ’ ಪ್ರದಾನದ ಮೂಲಕ ನಡೆಸುತ್ತಿರುವುದರ ಹಿಂದೆ ಅವರು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿದ ಆದರ್ಶದ ಬದುಕು, ಪರಿಶುದ್ಧ ಪರಂಪರೆ ಕೆಲಸ ಮಾಡಿದೆ. ಸುಮಾರು ೪ ದಶಕಗಳುದ್ದಕ್ಕೆ ಕಟ್ಟಿಗೆ ಒಡೆಯುವ ಅತ್ಯಂತ ಕಠಿಣ ಕಾಯಕ ನಡೆಸಿ, ಅದರದೇ ದುಡಿಮೆಯಿಂದ ಸುಶಿಕ್ಷಿತ ಕುಟುಂಬವನ್ನು ರೂಪಿಸಿದ ಪಡುಕೋಣೆ ಭಂಡಾರಮನೆ ನಾಣು ಯಾನೆ ನಾರಾಯಣ ನಾಯ್ಕರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಕೆ. ರಮೇಶ ಗಾಣಿಗ, ಸಂಘದ ನಿರ್ದೇಶಕಿ ಶಶಿಕಲಾ ನಾರಾಯಣ, ಕಾರ್ಮಿಕ ಮುಖಂಡ ಸುರೇಶ ಕಲ್ಲಾಗರ, ಪಿ. ಎನ್. ಶ್ರೀಧರ ಪಡುಕೋಣೆ, ಶ್ರೀನಿವಾಸ ಉಪಸ್ಥಿತರಿದ್ದರು.
ಪ್ರಶಸ್ತಿ ಆಯ್ಕೆ ಸಮಿತಿಯ ರಾಜೀವ ಪಡುಕೋಣೆ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜಗುರು ವಂದಿಸಿದರು.