ಕುಂದಾಪುರ,ಮೇ 15 (Daijiworld News/MSP): ಟಾಟಾ ಏಸ್ ಮತ್ತು ಲಾರಿ ಪರಸ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಟಾಟಾ ಏಸ್ ವಾಹನದ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಿರೂರು ಗ್ರಾಮದ ಶಿರೂರು ಒತ್ತಿನೆಣೆ ಸಮೀಪದ ನೀರ್ಗದ್ದೆ ಎಂಬಲ್ಲಿ ಮೇ 15 ರ ಮಂಗಳವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಯನ್ನು ಟಾಟಾ ಏಸ್ ವಾಹನ ಚಾಲಕ ನಾಗೂರು ಸಮೀಪದ ಉಳ್ಳೂರು ನಿವಾಸಿ ವಿ. ಸುನಿಲ್ ಪೂಜಾರಿ ಎಂದು ಗುರುತಿಸಲಾಗಿದೆ.
ಟಾಟಾ ಏಸ್ ವಾಹನ ಭಟ್ಕಳದಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿತ್ತು. ಇದೇ ಸಂದರ್ಭ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಾಹನಗಳೆರಡರ ಮುಂಭಾಗ ನುಜ್ಜುಗುಜ್ಜಾಗಿದ್ದು, ಚಾಲಕ ಸುನಿಲ್ ಪೂಜಾರಿ ತಲೆಗೆ ಗಂಭೀರ ಗಾಯಗಳಾಗಿವೆ. ಟಾಟಾ ಏಸ್ ವಾಹನದಲ್ಲಿದ್ದ ಮತ್ತೊಬ್ಬ ರೌಡಲ್ ಮೌರ್ಯ ಎಂಬುವರಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಚಾಲಕ ಸುನಿಲ್ ಅಸು ನೀಗಿದ್ದಾರೆ. ರೌಡಲ್ ಮೌರ್ಯ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.