ಕುಂದಾಪುರ, ಜು.02(DaijiworldNews/AK):ಭತ್ತ ಬೇಸಾಯವನ್ನು ಉಳಿಸಿಕೊಳ್ಳುವ ಮಹತ್ತರವಾದ ಜವಬ್ದಾರಿ ಇಂದು ಪ್ರತಿಯೊಬ್ಬರ ಮೇಲಿದೆ. ಆದರೆ ಅದು ಭಾಷಣಗಳಿಗಷ್ಟೇ ಸೀಮಿತವಾಗಿ ಹೋಗುತ್ತಿದೆ. ಅನುಷ್ಠಾನ ಎನ್ನುವುದು ಬೆರಳೆಣಿಕೆಯ ಕಡೆಗಳಲ್ಲಿ ಮಾತ್ರ. ಭತ್ತ ಬೇಸಾಯವನ್ನು ಉಳಿಸಿಕೊಳ್ಳಲೆಬೇಕಾದ ಅನಿವಾರ್ಯತೆ ಮತ್ತು ತುರ್ತು ನಮ್ಮ ಮುಂದಿದೆ. ಇಲ್ಲದಿದ್ದರೆ ಕರಾವಳಿಯಲ್ಲಿ ಅನ್ನದ ಬಟ್ಟಲುಗಳಂತ ಗದ್ದೆಗಳು ಹಿಂದೊಂದು ಕಾಲದಲ್ಲಿ ಇದ್ದಿದ್ದವು ಎಂದು ಇತಿಹಾಸವನ್ನು ನೋಡಬೇಕಾಗುತ್ತದೆ.
ಸಾಂಪ್ರದಾಯಿಕ ಭತ್ತ ಬೇಸಾಯ ಸಂಪೂರ್ಣ ನಶಿಸಿರುವ ಈ ಕಾಲಘಟ್ಟದಲ್ಲಿ ಯಾಂತ್ರಿಕೃತ ಕೃಷಿ ವಿಧಾನ ಅನುಸರಿಸಿ ಭತ್ತ ಬೇಸಾಯ ಮಾಡಿದರೆ ಲಾಭ ಗಳಿಸಬಹುದು ಎನ್ನುವ ಭರವಸೆಯ ಪ್ರಯೋಗಗಳು ನಡೆಯುತ್ತಿವೆ. ಈ ನಡುವೆ ಅಂಪಾರು ಸಮೀಪದ ಹಡಾಳಿ ಎಂಬಲ್ಲಿ ಯುವ ಕೃಷಿಕ ಸಂತೋಷ್ ಶೆಟ್ಟಿ ಬಲಾಡಿ ಅವರ ನೇತೃತ್ವದ ತಂಡ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಈ ಬಾರಿ 14.5 ಎಕ್ರೆ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ನಾಟಿ ಮಾಡಿದೆ. ಇದು ಅವರ ಎರಡನೇ ವರ್ಷದ ಪ್ರಯೋಗ. ಕಳೆದ ವರ್ಷ 10 ಎಕ್ರೆಯಲ್ಲಿ ಭತ್ತ ಬೇಸಾಯ ಮಾಡಿದ್ದರು. ಕಳೆದ ವರ್ಷ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಸ್ವತಃ ಗದ್ದೆಯಲ್ಲಿ ಉಳುಮೆ ಮಾಡುವ ಮೂಲಕ ಯುವ ತಲೆಮಾರು ಭತ್ತ ಬೇಸಾಯದತ್ತ ಬರಬೇಕು ಎನ್ನುವ ಸಂದೇಶ ರವಾನಿಸಿದ್ದರು.
ಕಳೆದ ಬಾರಿಯಿಂದ ಸ್ಪೂರ್ತಿ ಪಡೆದು ಈ ಬಾರಿ ಹಲವು ರೈತರು ಹಡಿಲು ಭೂಮಿಯನ್ನು ಭತ್ತ ಬೆಳೆಯುವುದರತ್ತ ಮನಸು ಮಾಡಿದ್ದರು. ಕೆಲ ರೈತರು ಈ ತಂಡಕ್ಕೆ ಭೂಮಿಯನ್ನು ಭತ್ತ ಬೇಸಾಯಕ್ಕೆ ನೀಡಿದ್ದಾರೆ. ಕಳೆದ ಬಹು ನಿರೀಕ್ಷೆ ಇಟ್ಟುಕೊಂಡಿತ್ತಾದರೂ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಸಂಭವಿಸಿತ್ತು.
ಅಷ್ಟಕ್ಕೆ ಕೈಕಟ್ಟಿ ಕುಳಿತುಕೊಳ್ಳದ ಸಂತೋಷ್ ಶೆಟ್ಟಿ ಬಲಾಡಿಯವರು ಈ ಬಾರಿ ಮುಂಜಾಗೃತ ಕ್ರಮವಾಗಿ 1.20 ಲಕ್ಷ ರೂ ವೆಚ್ಚದಲ್ಲಿ ಸೋಲಾರ್ ಆಧಾರಿತ ಐಬೆಕ್ಸ್ ಬೇಲಿ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಈ ಬಾರಿ ಕಾಡುಪ್ರಾಣಿಗಳ ಭಯವಿಲ್ಲ. ಯಾಂತ್ರೀಕೃತ ಕೃಷಿ ವಿಧಾನ ಬಳಕೆಯಿಂದ ಖರ್ಚು ಕಡಿಮೆ. ಯಾಂತ್ರೀಕೃತ ಬೇಸಾಯಕ್ಕೆ 7 ದಿನಗಳು ಸಾಕಾಗುತ್ತದೆ. 1280 ಮ್ಯಾಟ್ಗಳ ಬಳಕೆ ಮಾಡಿದ್ದಾರೆ. ಒಟ್ಟು ಅಂದಾಜು 1.50 ಖರ್ಚು ತಗಲಿದೆ ಎನ್ನುತ್ತಾರೆ ಸಂತೋಷ್ ಶೆಟ್ಟಿ.
ಈ ಬಾರಿ ಉತ್ತಮ ಇಳುವರಿಯ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಕುಂದನಾಡು ಹೆಸರಲ್ಲಿ ಅಕ್ಕಿ ಬ್ರ್ಯಾಂಡ್ ಮಾಡಿ ಮಾರಾಟ ಮಾಡಲಾಗುವುದು. ಕಂಪೆನಿಗೆ ಲಾಭ ಬರುತ್ತದೆ. ಮುಂದಿನ ದಿನಗಳಲ್ಲಿ ವಿವಿಧ ಬಗೆಯ ತರಕಾರಿ ಕೃಷಿ ಮಾಡುವ ಮೂಲಕ ರೈತರನ್ನು ಪ್ರೋತ್ಸಾಹಿಸಲಾಗುವುದು-ಸಂತೋಷ್ ಶೆಟ್ಟಿ ಬಲಾಡಿ, ಕೃಷಿಕರು ಹೇಳಿದರು.