ಉಳ್ಳಾಲ, ಜು.02(DaijiworldNews/AA): ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸವಾರ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪಾವೂರು ಮಲಾರು ಅಕ್ಷರನಗರ ನಿವಾಸಿ ವಿಶ್ವನಾಥ್ ಆಚಾರ್ಯ ಎಂಬವರ ಪುತ್ರ ಗಣೇಶ್ ಆಚಾರ್ಯ (27) ಮೃತ ದುರ್ದೈವಿ.
ಗಣೇಶ್ ಆಚಾರ್ಯ ಅವರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಹಕರಿಸಿದ ಹಿತೈಷಿಗಳ, ಸಂಬಂಧಿಕರ, ಸ್ನೇಹಿತರ ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.
ಜೂ.28 ರಂದು ಗಣೇಶ ಅವರು ಪಾವೂರು ಹರೇಕಳ ಕಡೆಯಿಂದ ಕೊಣಾಜೆ ಕಡೆಗೆ ತೆರಳುವ ವೇಳೆ ಬೆಳಿಗ್ಗೆ 11.50ರ ಸುಮಾರಿಗೆ ಹರೇಕಳ ಗ್ರಾಮ ಪಂಚಾಯತ್ ಕಚೇರಿಯ ಎದುರುಗಡೆ ಅಪಘಾತ ಸಂಭವಿಸಿತ್ತು. ಟಿಪ್ಪರ್ ವಾಹನ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆ ನಡೆಸಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸಮೇತ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನು ಟಿಪ್ಪರ್ ಲಾರಿ ಚಾಲಕ ಮಹಮ್ಮದ್ ಹನೀಫ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗಾಯಾಳುವನ್ನು ತಕ್ಷಣ ಟಿಪ್ಪರ್ ಚಾಲಕ ಸೇರಿದಂತೆ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳೂರಿನಲ್ಲಿ ಎ.ಸಿ ಮೆಕ್ಯಾನಿಕ್ ಆಗಿದ್ದ ಗಣೇಶ್, ಮನೆಯ ಹಿರಿಯ ಪುತ್ರನಾಗಿದ್ದು, ಜೀವನಾಧಾರವಾಗಿದ್ದರು. ಮೃತರು ತಾಯಿ, ತಂದೆ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಮೃತ ಗಣೇಶ್ ಆಚಾರ್ಯ ಶಸ್ತ್ರಚಿಕಿತ್ಸೆಗೆಂದು 10 ಲಕ್ಷ ರೂ. ಖರ್ಚಾಗುವುದರಿಂದ ಸ್ನೇಹಿತರು ವಾಟ್ಸ್ಯಾಪ್ ಮೂಲಕ ದಾನಿಗಳ ಸಹಕಾರವನ್ನು ಸಹ ಕೋರಿದ್ದರು.