ಕಡಬ, ಜು.01(DaijiworldNews/AA): ಎರಡು ವರ್ಷಗಳ ಹಿಂದೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ, ಕಡಬ ತಾಲೂಕು ಎಡಮಂಗಲ ಗ್ರಾಮದ ದಡ್ಡು ಎಂಬಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಆರೋಪಿ ಬೆಳ್ತಂಗಡಿ ನೆರಿಯಾ ನಿವಾಸಿ ಶರತ್ (24) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕಳವು ಮಾಡಿದ ಸೊತ್ತುಗಳನ್ನು ಪತ್ತೆ ಮಾಡಿ ಸ್ವಾದೀನಪಡಿಸಿಕೊಂಡಿದ್ದಾರೆ.
ಆರೋಪಿಯು 1,48,000 ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 30,000 ರೂ. ನಗದು ಸೇರಿ 1,78,000 ರೂ. ಮೌಲ್ಯದ ಸೊತ್ತನ್ನು ಕಳ್ಳತನ ಮಾಡಿರುತ್ತಾನೆ. ಆರೋಪಿಯ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 457, 380 ಅಡಿ ಪ್ರಕರಣ ದಾಖಲುಗೊಂಡಿತ್ತು. ಕಳೆದೆರಡು ವರ್ಷಗಳಿಂದ ತನಿಖೆ ನಡೆಸಲಾಗಿ, ಪ್ರಸ್ತುತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯ ಪತ್ತೆ ಕಾರ್ಯದಲ್ಲಿ, ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಸಿ ಬಿ ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಎಂ ಮತ್ತು ರಾಜೇಂದ್ರರವರುಗಳ ಮಾರ್ಗದರ್ಶನದಲ್ಲಿ, ವಿಜಯ ಪ್ರಸಾದ್, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ ರವರ ಮತ್ತು ಸುಳ್ಯ ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ಕೆ ರವರ ನೇತೃತ್ವದಲ್ಲಿ, ಬೆಳ್ಳಾರೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿ ಪಿ, ಹಾಗೂ ಬೆಳ್ಳಾರೆ ಪೊಲೀಸ್ ಠಾಣಾ ಸಿಬ್ಬಂದಿಗಳಾದ ನವೀನ ಕೆ. ಚಂದ್ರಶೇಖರ್ ಗೌಡ, ಸಂತೋಷ್ ಜಿ. ಜೀಪು ಚಾಲಕ ಪುರಂದರ ಹಾಗೂ ಬೆರಳುಮುದ್ರೆ ಘಟಕದ ಪ್ರಶಾಂತ್ ಹೊಸಮನಿ ಮತ್ತು ಸಚಿನ್ ಬಿ. ಬಿರವರನ್ನೊಳಗೊಂಡ ವಿಶೇಷ ತನಿಖಾ ತಂಡವು ಕರ್ತವ್ಯ ನಿರ್ವಹಿಸಿರುತ್ತಾರೆ. ತನಿಖಾ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯನ್ನು ವ್ಯಕ್ತವಾಗಿರುತ್ತದೆ.