ಮಂಗಳೂರು, ಜು.01(DaijiworldNews/AA): ಇಂಟಕ್ ದ.ಕ ಜಿಲ್ಲೆ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರಿಗೆ ಅಭಿನಂದನಾ ಕಾರ್ಯಕ್ರಮವು ನಗರದ ಇಂಟಕ್ ಸಭಾಂಗಣದಲ್ಲಿ ನಡೆಯಿತು.
ಸಮ್ಮಾನ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಐವನ್ ಡಿಸೋಜ ಅವರು, ಈ ಸಮ್ಮಾನ ನನಗೆ ಹೆಚ್ಚಿನ ಗೌರವ ತಂದಿದೆ. ಸದಾ ಕಾರ್ಮಿಕರ ಪರವಾಗಿ ಹೋರಾಡುತ್ತಾ ವಿವಿಧ ಸಂಘಟನೆಗಳ ಗೌರವಕ್ಕೆ ಪಾತ್ರವಾಗಿದ್ದೇನೆ. ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯ ಸಿಗಬೇಕಿದೆ. ಕಾರ್ಮಿಕರ ಸಂಘಟನೆ ಇಂಟಕ್ ಕಾರ್ಮಿಕರ ಪರವಾದ ಯಾವುದೇ ಬೇಡಿಕೆ ಮಂಡಿಸಿದರೂ ಮುಂದಿನ ಚಳಿಗಾಲದ ಅಧಿವೇಶದಲ್ಲಿ ಸರಕಾರದ ಮುಂದಿಟ್ಟು ಬೇಡಿಕೆ ಈಡೇರಿಸಲು ಸದನದಲ್ಲಿ ಒತ್ತಾಯಿಸುವೆ ಎಂದು ಹೇಳಿದರು.
ರಾಕೇಶ್ ಮಲ್ಲಿ ಮಾತನಾಡಿ, ಕಾರ್ಮಿಕರ ಹಕ್ಕುಗಳನ್ನು, ಅವರ ಸೌಲಭ್ಯಗಳನ್ನು ಮೊಟಕುಗೊಳಿಸುವ ಯಾವುದೇ ಕಾಯಿದೆಯನ್ನು ವಿರೋಧಿಸುತ್ತೇವೆ. ಕಾರ್ಮಿಕರ ಬೇಡಿಕೆ ಈಡೇರಿಸಲು ನಮ್ಮ ಸಂಘಟನೆ ಹಗಲಿರುಳು ಶ್ರಮಿಸುತ್ತಾ ಬಂದಿದೆ. ನಿಮ್ಮ ಆಯ್ಕೆಯಿಂದ ಹೆಚ್ಚಿನ ಶಕ್ತಿ ಸಿಕ್ಕಿದ್ದು, ನಮ್ಮ ಪರವಾಗಿ ನಿಂತು ಸದಸನದಲ್ಲಿ ಶಾಸಕರು ಧ್ವನಿಯೆತ್ತಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ ಇಂಟಕ್ ಅಧ್ಯಕ್ಷ ಮನೋಹರ ಶೆಟ್ಟಿ ಅವರು 60 ವರ್ಷ ಮೇಲ್ಪಟ್ಟ ಅಸಂಘಟಿತ ಕಾರ್ಮಿಕರು ಅನಿವಾರ್ಯ ಕಾರಣಗಳಿಂದ ದುಡಿಯುತ್ತಾ ಬರುತ್ತಿದ್ದು, ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಇತರ ಕಾರ್ಮಿಕರಂತೆಯೇ ಆರೋಗ್ಯ, ವಿಮೆ ಸಹಿತ ಸವಲತ್ತು ದೊರಕಬೇಕು. ವೆನ್ಲಾಕ್ ಬಳಿ,ಇಎಸ್ಐ ಮೆಡಿಕಲ್ ಕಾಲೇಜ್ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಅಬೂಬಕರ್ ಕೃಷ್ಣಾಪುರ, ಸುರೇಶ್ ಪಿ.ಕೆ ಮತ್ತಿತರರು ಶಾಸಕರನ್ನು ಅಭಿನಂದಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಬಿ.ಎ ರಹೀಂ, ಪ್ರಮುಖರಾದ ವಿಲಿ ಡಿಸೋಜ, ಸ್ಟೀವನ್, ಪುರುಷೋತ್ತಮ್ ಚಿತ್ರಾಪುರ, ವಿನೋದ್ ಪಣಂಬೂರು, ಪುರುಷೋತ್ತಮ್ ಪೂಜಾರಿ, ರತನ್, ಮುಡಾ ಸದಸ್ಯೆ ಮಿಸ್ಕಿತ್, ತೌಸಿರ್ ಅಹ್ಮದ್, ಕುದುರೆಮುಖ ಯೂನಿಯನ್ ಪ್ರಮುಖರು, ಕಬಡ್ಡಿ ಎಸೋಸಿಯೇಶನ್, ಕೆನರಾ ಟಿಂಬರ್, ಗೂಡ್ಸ್ ಶೆಡ್ ಯೂನಿಯನ್ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.