ಮಂಗಳೂರು, ಮೇ 15 (Daijiworld News/MSP): ಶ್ರೀಮತಿ ಶೆಟ್ಟಿಯ(35) ಬರ್ಬರ ವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ವಿವಿಧೆಡೆ ಎಸೆದು ಪರಾರಿಯಾಗಿರುವ ಪೈಶಾಚಿಕವಾದ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದ್ದು, ಬುಧವಾರ ಶ್ರೀಮತಿ ಶೆಟ್ಟಿಯ ಮೃತದೇಹದ ಉಳಿದ ಭಾಗಗಳಾದ ಕಾಲುಗಳು ಪತ್ತೆಯಾಗಿದೆ.
ನಂತೂರಿನ ಶ್ರೀನಿವಾಸ್ ಮಲ್ಯ ಪಾರ್ಕ್ ನ ಪಾದುವ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದ್ದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದು ತನಿಖೆ ಮುಂದುವರಿಸಿದ್ದಾರೆ.
ಮೇ.12ರಂದು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕದ್ರಿ ಪಾರ್ಕ್ ಬಳಿ ಎಸೆದು ಹೋಗಿದ್ದ ಗೋಣಿಚೀಲದಲ್ಲಿ ಶ್ರೀಮತಿ ಶೆಟ್ಟಿಯ ರುಂಡ ಪತ್ತೆಯಾಗಿದ್ದರೆ, ಮಂಗಳಾದೇವಿಯ ನಂದಿಗುಡ್ಡದ ಬಳಿ ಸಿಕ್ಕಿದ ಗೋಣಿಚೀಲದಲ್ಲಿ ಶವದ ಇತರ ದೇಹದ ಭಾಗಗಳು ಪತ್ತೆಯಾಗಿದ್ದವು. ಆದರೆ ಕಾಲಿನ ಭಾಗ ಪತ್ತೆಯಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಮಹಿಳೆಯ ಕಾಲುಗಳ ಪತ್ತೆಗಾಗಿ ಮಂಗಳವಾರ ನಾಗುರಿಯ ಬಾವಿಯೊಂದರಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಪೌರ ಕಾರ್ಮಿಕರು ಬುಧವಾರ ಬೆಳಗ್ಗೆ ಸ್ವಚ್ಚಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಮಹಿಳೆಯ ಕಾಲಿನ ಭಾಗ ನೋಡಿ ಬೆಚ್ಚಿ ಬಿದ್ದು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೇ.12ರಂದು ಮಹಿಳೆಯ ರುಂಡದ ಭಾಗದ ಪತ್ತೆಯಾದ ಅಣತಿ ದೂರದಲ್ಲಿ ಮಹಿಳೆಯ ಕಾಲಿನ ಭಾಗ ಪತ್ತೆಯಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಜತೆಗೆ ಈ ಕೊಲೆಯನ್ನು ಪೊಲೀಸರು ಕೂಡ ಅತ್ಯಂತ ಗಂಭೀರ ಹಾಗೂ ಮಹತ್ವದ ಪ್ರಕರಣವಾಗಿ ಪರಿಗಣಿಸಿದ್ದು, ಕೊಲೆ ಯನ್ನು ಭೇದಿಸುವಲ್ಲಿ ಸಾಕಷ್ಟು ತಾಂತ್ರಿಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶ್ರೀಮತಿ ಶೆಟ್ಟಿಯ ಕೊಲೆಗೆ ಹಣಕಾಸು ವ್ಯವಹಾರವೇ ಕಾರಣ ಕಾರಣ ಇರಬಹುದೆಂದು ಶಂಕಿಸಲಾಗಿದೆ.
ಶ್ರೀಮತಿ ಶೆಟ್ಟಿ ಅವರ ದೇಹದ ಅಂಗಾಂಗಳನ್ನು ಕೊಲೆಗಡುಕರು ಕತ್ತರಿಸಿರುವುದನ್ನು ನೋಡಿದ್ರೆ, ಕತ್ತರಿಸುವ ಯಂತ್ರವೊಂದನ್ನು ಬಳಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಹಿಳೆಯ ತಲೆ, ದೇಹದ ಭಾಗ ಹಾಗೂ ಕೈಕಾಲುಗಳನ್ನು ಕತ್ತರಿಸಿರುವ ರೀತಿ ನೋಡಿದರೆ, ಮಾರಕಾಸ್ತ್ರದ ಬದಲು ಮರವನ್ನು ಕತ್ತರಿಸುವ ಮಾದರಿಯ ಅತ್ಯಂತ ಹರಿತವಾದ ಯಂತ್ರವನ್ನು ಬಳಸಿರಬಹುದು ಎನ್ನುವ ಸಂಶಯ ಮೂಡಿದೆ.