ಉಡುಪಿ, ಜು 01(DaijiworldNews/MS): ರಾತ್ರಿ ಹೊತ್ತು ಅನುಮಾನಸ್ಪದ ರೀತಿಯಲ್ಲಿ ಸುತ್ತಾಡುತ್ತ ಭೀತಿ ಹುಟ್ಟಿಸಿದ ವ್ಯಕ್ತಿಯನ್ನು ಗಸ್ತು ಕರ್ತವ್ಯದಲ್ಲಿದ್ದ ನಗರ ಪೋಲಿಸ್ ಠಾಣೆಯ ಪೋಲಿಸರು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೆಂದು ತಿಳಿದುಬಂದಿತು. ನಗರ ಪೋಲಿಸ್ ಠಾಣೆಯ ತನಿಖಾ ಸಹಾಯಕ ರಿಯಾಜ್ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಲ್ಲಿ ಯುವಕನ ಅಸಹಾಯಕತೆಗೆ ಸ್ಪಂದಿಸುವಂತೆ ಕೇಳಿಕೊಂಡರು. ಬಳಿಕ ಯುವಕನನ್ನು ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಲಾಯಿತು.
ರಕ್ಷಿಸಲ್ಪಟ್ಟ ಯುವಕ ಚೇತರಿಕೆಕಂಡ ಬಳಿಕ ಕಲ್ಬುರ್ಗಿಯ ರವೀಂದ್ರ ಕುಮಾರ್ ಎಂದು ತಿಳಿದುಬಂದಿತು. ಮನೆಯವರಿಗೆ ವಿಷಯ ಮುಟ್ಟಿಸಲಾಯಿತು. ಕೆಲವು ದಿನಗಳಿಂದ ಮಗನ ಹುಡುಕಾಟದಲ್ಲಿದ್ದ ಯುವಕನ ತಂದೆ ಉಡುಪಿಗೆ ಬಂದು, ಪೋಲಿಸರನ್ನು ಸಂಪರ್ಕಿಸಿದರು. ಬಳಿಕ ಪೋಲಿಸರು ರಕ್ಷಿಸಲ್ಪಟ್ಟ ಮಗನನ್ನು ತಂದೆಗೆ ಹಸ್ತಾಂತರಿಸಿದರು. ನಗರ ಪೋಲಿಸ್ ಠಾಣೆಯ ಮಾನವೀಯ ಪ್ರಜ್ಜೆಗೆ ಮೆಚ್ಚುಗೆ ವ್ಯಕ್ತವಾಯಿತು.