ಮಂಗಳೂರು, ಜೂ.30(DaijiworldNews/AK): ಕಳಪೆಯಾಗಿ ನಿರ್ಮಿಸಲಾಗಿದ್ದ ಖಾಸಗಿ ಕಾಂಪೌಂಡ್ ಗೋಡೆಯೊಂದು ಮನೆಯ ಮೇಲೆ ಕುಸಿದು ಬಿದ್ದ ಪರಿಣಾಮ ಘಟನೆ ಬಜಾಲ್ ಪಳ್ಳಕೆರೆ ಗಾಣದ ಬೆಟ್ಟು ಎಂಬಲ್ಲಿ ಭಾನುವಾರ ನಡೆದಿದೆ.
ಈ ಹಿಂದೆ ಮೂರು ಬಾರಿ ಕುಸಿದಿದ್ದ ಗೋಡೆಯು ಭೂಕುಸಿತಕ್ಕೆ ಕಾರಣವಾಗಿದ್ದು, ಸಮೀಪದ ಮನೆಗಳಿಗೆ ಹಾನಿಯಾಗಿದೆ. ಸ್ಥಳೀಯ ನಿವಾಸಿ ವಿಶ್ವನಾಥ್ ಅವರು ಈ ಹಿಂದೆ ಜಿಲ್ಲಾಧಿಕಾರಿಗೆ ಗೋಡೆಯ ಬಗ್ಗೆ ದೂರು ನೀಡಿದ್ದರೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.
ಕುಸಿದು ಬಿದ್ದ ಮನೆ ರಾಧಾಕೃಷ್ಣ ಅವರಿಗೆ ಸೇರಿದ್ದು, ಬಾಡಿಗೆಗೆ ನೀಡಲಾಗಿತ್ತು. ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ಬಾಡಿಗೆದಾರರು ಮನೆಯಲ್ಲಿರಲಿಲ್ಲ ಮತ್ತು ಸುರಕ್ಷಿತವಾಗಿದ್ದಾರೆ.
ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿ ಜೀತನ್ ಡಿಸೋಜ, ‘ಈ ಗೋಡೆ ಮೂರು ಬಾರಿ ಕುಸಿದಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ . ಆದರೆ ಈ ಬಗ್ಗೆ ಈ ಹಿಂದೆ ಜಿಲ್ಲಾಧಿಕಾರಿಗೆ ತಿಳಿಸಿದ್ದೆವು ಆದರೆ ಕ್ರಮಕೈಗೊಂಡಿಲ್ಲ. 10 ಎಕರೆ ಖಾಸಗಿ ಜಾಗದಲ್ಲಿ ನಿರ್ಮಿಸಿರುವ ಕಡಿಮೆ ಗುಣಮಟ್ಟದ ಕಾಂಕ್ರೀಟ್ ಗೋಡೆಯಿಂದ ಗುಡ್ಡ ಕುಸಿತ ಉಂಟಾಗುತ್ತಿದ್ದು, ಮನೆಯ ನಿವಾಸಿಗಳನ್ನು ಸಮೀಪದ ಮನೆಗೆ ಸ್ಥಳಾಂತರಿಸಲಾಗಿದೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.