ಮಂಗಳೂರು, ಜೂ.30(DaijiworldNews/AA): ಮಳೆಗಾಲದಲ್ಲಿ ವಿದ್ಯುತ್ ಆಘಾತದಿಂದ ಮತ್ತೆ ಜಿಲ್ಲೆಯಲ್ಲಿ ಪ್ರಾಣಹಾನಿ, ನೋವು ಸಂಭವಿಸಿದರೆ ಸಂಬಂಧಪಟ್ಟ ಮೆಸ್ಕಾಂನ ಅಧಿಕಾರಿಗಳೇ ಜವಾಬ್ದಾರರಾಗಲಿದ್ದಾರೆ. ಆಯಾ ವ್ಯಾಪ್ತಿಯ ಕಾರ್ಯನಿರ್ವಾಹಕ ಇಂಜಿನಿಯರ್ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಎಚ್ಚರಿಸಿದ್ದಾರೆ.
ವಿದ್ಯುತ್ ಆಘಾತದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿರುವ ಮೂರು ಸಾವುಗಳ ಹಿನ್ನೆಲೆಯಲ್ಲಿ ಬಿಜೈನಲ್ಲಿರುವ ಮೆಸ್ಕಾಂ ಆಡಳಿತ ಕಚೇರಿಯಲ್ಲಿ ಇಂದು ನಡೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಾಕೃತಿಕ ವಿಕೋಪಗಳು ಸಹಜ. ಆದರೆ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಪ್ರಾಣ ಹಾನಿ ಸಂಭವಿಸಬಹುದಾದ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ಇರಬಾರದು. ಅಪಾಯ ಸಂಭವಿಸಿದ ಬಳಿಕ ನಮ್ಮ ಮೇಲೆ ಪ್ರಕರಣ ದಾಖಲಿಸಬೇಡಿ ಎಂದರೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ವಿದ್ಯುತ್ ಕಂಬಗಳ ಮೇಲೆ ಬೀಳಬಹುದಾದ ಮರಗಳ ಕೊಂಬೆಗಳನ್ನು ತೆರುವುಗೊಳಿಸುವುದು, ಕಂಬಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೆ ಅವುಗಳನ್ನು ನಿರಂತರ ಪರಿಶೀಲನೆಯ ಮೂಲಕ ಮೆಸ್ಕಾಂ, ಪಿಡಬ್ಲ್ಯೂಡಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ವಿದ್ಯುತ್ ಕಂಬ ಅಥವಾ ತಂತಿಗಳಿಗೆ ಮರ ಬೀಳುವ ಸ್ಥಿತಿಯಲ್ಲಿದ್ದರೆ, ಅವುಗಳನ್ನು ತೆರವುಗೊಳಿಸಲು ವಿಳಂಬ ಮಾಡಬಾರದು. ಈಗ ಎಲ್ಲ ಅಗತ್ಯ ಸಾಧನೆ, ಸಲಕರಣೆಗಳಿದ್ದರೂ ಈ ರೀತಿ ಮುಂಚಿತವಾಗಿ ತೆರವುಗೊಳಿಸುವ ಕಾರ್ಯ ಯಾಕಾಗುತ್ತಿಲ್ಲ? ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಾಗ ಹಾಗೂ ಮಳೆಗಾಲದಲ್ಲಿ ಟ್ರಾನ್ಸ್ಫಾರ್ಮರ್ ಬಳಿ ಜನರು ಸುಳಿದಾಡದಂತೆ ಜಾಗೃತಿ ಸಂದೇಶ ನೀಡುವ ಕೆಲಸ ಮೆಸ್ಕಾಂನಿಂದ ಆಗಬೇಕು ಎಂದು ಸೂಚನೆ ನೀಡಿದ್ದಾರೆ.
ಮಳೆಗಾಲ ಸಂದರ್ಭದಲ್ಲಿ ಸಮುದ್ರ ಬದಿ, ನದಿ, ರಾಜ ಕಾಲುವೆ, ಚರಂಡಿ ಬಳಿ ವಿದ್ಯುತ್ ಅಪಘಾತ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಬೀಳುವ ಹಂತದಲ್ಲಿರುವ ವಿದ್ಯುತ್ ಕಂಬ, ಮರಗಳು ತಕ್ಷಣ ತೆರವು ಮಾಡುವುದರೊಂದಿಗೆ ವಿದ್ಯುತ್ ತಂತಿ ಕಡಿದು ಬಿದ್ದಾಗ ಅದರಲ್ಲಿ ವಿದ್ಯುತ್ ಪ್ರವಹಿಸದ ನಿಟ್ಟಿನಲ್ಲಿ ಟ್ರಿಪ್ಪರ್ಗಳನ್ನು ಅಳವಡಿಸುವ ಕಾರ್ಯ ಶೀಘ್ರ ನಡೆಯಬೇಕು. ಸಮಸ್ಯೆ ಆಗದಂತೆ ಮುಂಚಿತವಾಗಿ ಎಚ್ಚರಿಕೆ ವಹಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿಬೇಕು. ಪ್ರಸ್ತುತ ಮಂಗಳೂರು ನಗರದಲ್ಲಿ ಖಾಲಿ ಜಾಗ ಇಲ್ಲದೆ ಇರುವುದರಿಂದ ಮುಂದಿನ ವರ್ಷಗಳಲ್ಲಿ ಕಾಲೇಜುಗಳು ಉದ್ಯಮಗಳು ಇತ್ಯಾದಿ ಅಭಿವೃದ್ಧಿ ಕೆಲಸಗಳು ಉಳ್ಳಾಲ, ಮೂಡಬಿದ್ರೆ, ಮೂಲ್ಕಿ ಭಾಗದಲ್ಲಿ ಬರಲಿವೆ. ಹಾಗಾಗಿ ಇಂತಹ ಅಭಿವೃದ್ಧಿ ಶೀಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗದಂತೆ ಜಿಲ್ಲೆಗೆ ಮುಂದಿನ 30 ವರ್ಷಗಳ ಜನಸಂಖ್ಯೆ ವಿದ್ಯುತ್ ಬೇಡಿಕೆಯನ್ನು ಗಮನದಲ್ಲಿರಿಸಿ ಮೆಸ್ಕಾಂನಿಂದ ಪೂರಕ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅವರು, ಪಾಂಡೇಶ್ವರದಲ್ಲಿ ಇತ್ತೀಚೆಗೆ ವಿದ್ಯುತ್ ಆಘಾತದಿಂದ ಇಬ್ಬರು ಆಟೋಚಾಲಕರು ಸಾವಿಗೀಡಾದ ಘಟನೆಯನ್ನು ಉಲ್ಲೇಖಿಸುತ್ತಾ, ವಿದ್ಯುತ್ ಪ್ರವಹಿಸುತ್ತಿದ್ದ ತಂತಿತಾಗಿ ಓರ್ವ ಚಾಲಕ ಸಾವನ್ನಪ್ಪಿದರು. ಆ ಸಂದರ್ಭದಲ್ಲಿ ಒಳಗಿನಿಂದ ಬಂದ ಇನ್ನೋರ್ವ ಚಾಲಕ ಅವರ ಪ್ರಾಣ ಉಳಿಸಲು ಗೋಣಿ ಚೀಲದೊಂದಿಗೆ ಕೈ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ವಿದ್ಯುತ್ ಆಘಾತದ ವೇಳೆ ಯಾವ ರೀತಿಯಲ್ಲಿ ರಕ್ಷಣೆಗೆ ಮುಂದಾಗಬೇಕು ಎಂಬ ತಿಳುವಳಿಕೆ ಇಲ್ಲದೆ ಮತ್ತೊಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ವಿದ್ಯುತ್ ಆಘಾತದ ಸಂದರ್ಭ ಯಾವ ರೀತಿಯಲ್ಲಿ ಪ್ರಾಣ ಕಾಪಾಡಬಹುದು ಎಂಬ ಕುರಿತು ಚುಟುಕಾದ ವೀಡಿಯೋ ಸಂದೇಶಗಳ ಮೂಲಕ ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದರು.
ಮೆಸ್ಕಾಂನ ಹಿರಿಯ ಅಧಿಕಾರಿ ಮಾತನಾಡಿ, ಮೆಸ್ಕಾಂನಲ್ಲಿ ಅತಿಯಾಗಿ ಕಾಡುವ ಸಮಸ್ಯೆಗಳ ಮಾಹಿತಿ ನೀಡುವಂತೆ ಯು.ಟಿ.ಖಾದರ್ ತಿಳಿಸಿದಾಗ, ಜಿಲ್ಲೆಯಲ್ಲಿ ಶೇ. 50ರಷ್ಟು ಲೈನ್ಮ್ಯಾನ್ಗಳ ಕೊರತೆ ಇದೆ. ಜಿಲ್ಲೆಗೆ ನಿಯೋಜಿಸಲ್ಪಡು ಹೊರ ಜಿಲ್ಲೆಗಳ ಲೈನ್ಮ್ಯಾನ್ಗಳು ಕೆಲ ಸಮಯದಲ್ಲೇ ವರ್ಗಾವಣೆ ಪಡೆದು ತೆರಳುತ್ತಾರೆ. ನೇಮಕಾತಿ ಪ್ರಕ್ರಿಯೆ ಆಗಬೇಕಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಉಪ ಸಂಕ್ಷಣಾಧಿಕಾರಿ ಆಂಟನಿ ಮರಿಯಪ್ಪ ಮೆಸ್ಕಾಂ ವ್ಯವಸಾಕ ನಿರ್ದೇಶಕಿ ಪದ್ಮಾವತಿ ಉಪಸ್ಥಿತರಿದ್ದರು.