ಉಳ್ಳಾಲ, ಜೂ.29(DaijiworldNews/AA): ಭ್ರಷ್ಟಾಚಾರ, ಕರ್ತವ್ಯಲೋಪ, ಕಡತ ವಿಲೇವಾರಿಯಲ್ಲಿ ಹಿನ್ನೆಡೆ ದೂರುಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ನಾಟೆಕಲ್ ನಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಇಬ್ಬರು ಸರ್ವೇಯರ್ಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ತನಿಖೆಗೆ ಪಡೆದುಕೊಂಡಿದ್ದಾರೆ.
ಮಂಗಳೂರು ತಾಲೂಕು ಕಚೇರಿಯಲ್ಲಿರುವ ಭೂದಾಖಲೆಗಳ ಉಪನಿರ್ದೇಶಕರ ಕಚೇರಿ ಗೆ ಬೆಳಿಗ್ಗೆ ದಾಳಿ ನಡೆಸಿದ ಲೋಕಾಯುಕ್ತ ತಂಡ ಮಧ್ಯಾಹ್ನ ನಂತರ ನಾಟೆಕಲ್ ನಲ್ಲಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭ ಸಿಕ್ಕ ಮಾಹಿತಿ ಆಧಾರದಡಿ ಲೈಸೆನ್ಸ್ ಹೊಂದಿದ ಸರ್ವೇಯರ್ ಹಾಗೂ ಸರಕಾರಿ ಸರ್ವೇಯರ್ ಕೃಷ್ಣಮೂರ್ತಿ ಎಂಬವರ ಬಂಟ್ವಾಳದಲ್ಲಿರುವ ಮನೆಗೆ ತೆರಳಿ ತಂಡ ಪರಿಶೀಲನೆ ನಡೆಸಿದೆ. ತಡರಾತ್ರಿ 7.30 ವರೆಗೂ ತಂಡ ಪರಿಶೀಲನೆ ನಡೆಸಿ, ಕೆಲ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.