ಕುಂಬಳೆ: ಅಪಹರಣ ಪ್ರಕರಣಕ್ಕೆ ಟ್ವಿಸ್ಟ್; ನಾಪತ್ತೆಯಾಗಿದ್ದ ಜೋಡಿ ವಿವಾಹವಾಗಿ ಪತ್ತೆ
Tue, May 14 2019 11:12:10 PM
ಕುಂಬಳೆ, ಮೇ 14 (Daijiworld News/SM): ಕಿದೂರು ಕಳತ್ತೂರಿನ ಯುವತಿ ಹಾಗೂ ಕುಂಜತ್ತೂರು ನಿವಾಸಿ ಸುಪ್ರಿತ್(25) ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇವರಿಬ್ಬರು ಮದುವೆಯಾಗಿ ಪತ್ತೆಯಾಗಿದ್ದಾರೆ. ಇವರಿಬ್ಬರು ಕಳೆದ ೭ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇದೀಗ ಇಬ್ಬರು ತಮ್ಮಿಚ್ಛೆಯಂತೆ ಮದುವೆಯಾಗಿದ್ದಾರೆ.
ಕುಂಬಳೆ ಠಾಣಾ ವ್ಯಾಪ್ತಿಯ ಕಿದೂರು ಕಳತ್ತೂರಿನ ಪಂಚಮಿ ಎಂಬ ಯುವತಿಯನ್ನು ಸುಪ್ರಿತ್ ಪ್ರೀತಿಸುತ್ತಿದ್ದ. ಆದರೆ, ಮನೆ ಮಂದಿ ಇವರ ಮದುವೆಗೆ ನಿರಾಕರಿಸಿದ್ದಾರೆ. ಪರಸ್ಪರರನ್ನು ಬಿಟ್ಟು ಇರಲಾಗದ ಈ ಜೋಡಿ ಮನೆ ಬಿಟ್ಟು ತೆರಳಲು ನಿರ್ಧರಿಸಿದ್ದರು. ಅದರಂತೆ ಮೇ 13ರ ಸೋಮವಾರ ಮನೆ ಬಿಟ್ಟು ಹೊರಟಿದ್ದಾರೆ.
ಸುಪ್ರಿತ್ ತಾನು ಪ್ರೀತಿಸಿದ ಹುಡುಗಿಯನ್ನು ಮನೆಯಿಂದಲೇ ಕರೆ ತಂದಿದ್ದಾನೆ. ಆದರೆ, ಇದನ್ನು ಕಂಡ ಸ್ಥಳೀಯರು ತಪ್ಪಾಗಿ ಗ್ರಹಿಸಿದ್ದು, ಯುವತಿಯನ್ನು ಸುಪ್ರಿತ್ ಅಪಹರಿಸಿದ್ದಾನೆ ಎಂಬುವುದಾಗಿ ಸುದ್ದಿ ರವಾನಿಸಿದ್ದಾರೆ. ಅಪಹರಣದ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ. ತಕ್ಷಣ ಸ್ಥಳೀಯರು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಹಲವು ಕಡೆಗಳಲ್ಲಿ ವಾಹನಗಳನ್ನು ತಡೆದು ವಾಹನದಲ್ಲಿರುವ ಪ್ರಯಾಣಿಕರನ್ನು ವಿಚಾರಣೆ ನಡೆಸಿದ್ದಾರೆ.
ಆದರೆ, ಇದೀಗ ಈ ಜೋಡಿ ಮದುವೆ ಮಾಡಿಕೊಂಡಿದ್ದು, ಪರಸ್ಪರ ಖುಷಿಯಲ್ಲಿದ್ದೇವೆ ಎನ್ನುವ ವೀಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಯಾರೂ ಕೂಡ ತಮ್ಮನ್ನು ಹುಡುಕಬೇಡಿ. ನಮ್ಮ ತಂಟೆಗೆ ಬಂದಲ್ಲಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ತಪ್ಪು ಸಂದೇಶ ತಂದ ಅವಾಂತರ: ಈ ನಡುವೆ ಯುವತಿಯ ಅಪಹರಣ ಎಂದು ತಪ್ಪು ಮಾಹಿತಿ ರವಾನೆಯಾದ ಹಿನ್ನೆಲೆ ಎರಡು ಕಡೆಗಳಲ್ಲಿ ಘರ್ಷಣೆಗೂ ಕಾರಣವಾಗಿತ್ತು. ಕುಂಬಳೆ ಬಂದ್ಯೋಡ್ ಸಮೀಪ ತಪ್ಪು ತಿಳುವಳಿಕೆ ಕಾರಣ ಅನ್ಯಕೋಮಿನ ಯುವತಿಯ ಅಪಹರಣ ಎಂದು ತಿಳಿದು ದಾರಿಗೆ ಅಡ್ಡಲಾಗಿ ಕಾರನ್ನು ತಡೆಗಟ್ಟಿ ಪುಡಿ ಮಾಡಲಾಗಿದೆ. ಇನ್ನು ವಿಟ್ಲ ಠಾಣಾ ವ್ಯಾಪ್ತಿಯ ಗಡಿ ಪ್ರದೇಶ ಸಾರಡ್ಕದಲ್ಲಿ ರಾತ್ರಿ ವೇಳೆ ಬೊಲೆರೋ ವಾಹನ ನಡೆದ ತಂಡ ವಾಹನವನ್ನು ಸಂಪೂರ್ಣ ಪುಡಿಗೈದಿದೆ. ಅಲ್ಲದೆ, ಈ ಸಂದರ್ಭ ಗುಂಪು ಘರ್ಷಣೆ ನಡೆದಿದೆ. ಇನ್ನು ಇದನ್ನು ತಡೆಯಲು ಪೊಲೀಸರು ಲಾಠಿ ಬೀಸಿದ್ದರು. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.