ಕಾಪು, ಜೂ.29(DaijiworldNews/AA): 4 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾಪು ಪೊಲೀಸರು ದಾವಣಗೆರೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಹರಪ್ಪನಹಳ್ಳಿಯ ದ್ಯಾಪನಾಯಕನ ಹಳ್ಳಿ ನಿವಾಸಿ ಭರಮಪ್ಪ ಕಡಬಗೇರಿ (55) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತ ಆರೋಪಿಯು 2020ರಲ್ಲಿ ಕಟಪಾಡಿಯ ಗ್ಯಾರೇಜ್ವೊಂದರಲ್ಲಿ ಇತರ ಮೂವರೊಂದಿಗೆ ಸೇರಿಕೊಂಡು ಗದಗ ಮೂಲದ ಮಲ್ಲೇಶ್ನ ಮೇಲೆ ಹಲ್ಲೆ ನಡೆಸಿದ್ದ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗೂ ಆರೋಪಿ ಭರಮಪ್ಪನನ್ನು ಪೊಲೀಸರು ಬಂಧಿಸಿದ್ದರು.
ಆ ಬಳಿಕ ಆರೋಪಿಯು ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ನ್ಯಾಯಾಲಯವು ಪ್ರಕಟಣೆ ಹೊರಡಿಸಿದ್ದು, ಪೊಲೀಸರು ಆತನ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದರು. ಇದೀಗ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ.