ಉಪ್ಪಿನಂಗಡಿ, ಜೂ 29 (DaijiworldNews/MS): ದಾಂಪತ್ಯ ಕಲಹದಿಂದ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ನೇತ್ರಾವತಿ ಸೇತುವೆಯ ತಡೆಗೋಡೆ ಏರಿದಾಗ ಆಕೆಯ ಜೀವವನ್ನು ಅವರ ಸಾಕು ನಾಯಿ ಉಳಿಸಿರುವ ಘಟನೆಯೊಂದು ನಡೆದಿದೆ.
ಪಿಲಿಗೂಡು ನಿವಾಸಿ ಮಹಿಳೆ (36 ವರ್ಷ) ತನ್ನ ಪತಿಯೊಂದಿಗಿನ ಜಗಳದಿಂದ ನೊಂದು ಗುರುವಾರ ರಾತ್ರಿ ನಾಲ್ಕು ಕಿ.ಮೀ. ನಡೆದು ದೂರದ ನೇತ್ರಾವತಿ ಸೇತುವೆ ಬಂದಿದ್ದು, ಹಾರಲು ಯತ್ನ ಮಾಡುತ್ತಿರುವಾಗ, ಮನೆಯಿಂದಲೇ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು, ಬೊಗಳಲು ಪ್ರಾರಂಭಿಸಿದೆ. ಈ ಮೂಲಕ ರಸ್ತೆಯಲ್ಲಿ ಹೋಗುವವರ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಇದೇ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೋರ್ವರು ಇದನ್ನು ಕಂಡು ಪರಿಚಯದ ಸಮಾಜ ಸೇವಕರೋರ್ವರ ಮೂಲಕ ಇನ್ನೇನು ನದಿಗೆ ಹಾರುವಂತಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ.
ಬೆಂಗಳೂರು ಮೂಲದ ಈ ಮಹಿಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಪಿಲಿಗೂಡಿನ ಯುವಕನನ್ನು ಪ್ರೀತಿಸಿ ಮದುವೆಯಾಗಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದರು . 16 ವರ್ಷದಿಂದ ನೆಮ್ಮದಿಯಾಗಿದ್ದ ಸಂಸಾರದಲ್ಲಿ ಪತಿ ಮತ್ತು ಪತ್ನಿ ನಡುವೆ ವಿರಸ ಮೂಡಿತ್ತು. ಗುರುವಾರ ನೊಂದುಕೊಂಡ ಮಹಿಳೆ ಜೀವ ತ್ಯಜಿಸುವ ನಿರ್ಧಾರ ಮಾಡಿ ಹೊರಟಿದ್ದಾಗ ನಾಯಿ ಕೂಡ ಹಿಂಬಾಲಿಸಿಕೊಂಡು ಬಂದಿತ್ತು. ಮಹಿಳೆ ಸೇತುವೆಯ ಮೇಲೇರಲು ಯತ್ನಿಸುತ್ತಿದ್ದಂತೆ ನಾಯಿ ಅಪಾಯವನ್ನು ಅರಿತು ಚೂಡಿದಾರವನ್ನು ಕಚ್ಚಿ ಎಳೆದು ಜೋರಾಗಿ ಬೊಗಳುತ್ತಾ ಇತರರ ಗಮನ ಸೆಳೆದು ರಕ್ಷಿಸಿತ್ತು.