ಬೆಳ್ತಂಗಡಿ, ಜೂ.28(DaijiworldNews/AA): ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧನ ವಿರೋಧಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜ ಸೇರಿ 65 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಪ್ರತಿಭಟನೆ ನಡೆಸಿದ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಸೇರಿದಂತೆ 65 ಮಂದಿ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಮೊದಲ ಪ್ರಕರಣದಲ್ಲಿ 28 ಮಂದಿ ಮತ್ತು 2ನೇ ಕೇಸ್ನಲ್ಲಿ 37 ಮಂದಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಜುಲೈ 10ರಂದು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಬೆಳ್ತಂಗಡಿ ಪೊಲೀಸರು ಎರಡೂ ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಇದೀಗ ಕೋರ್ಟ್ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆ ಆರಂಭಿಸಲಿದೆ ಎಂದು ಹೇಳಲಾಗಿದೆ.