ಮಂಗಳೂರು, ಮೇ14(Daijiworld News/SS): ನಗರದಲ್ಲಿ ಮೇ12ರಂದು ಬೆಳ್ಳಂಬೆಳಗ್ಗೆ ಶ್ರೀಮತಿ ಶೆಟ್ಟಿ ಎಂಬ ಮಹಿಳೆಯನ್ನು ಭೀಕರವಾಗಿ ಕೊಲೆಗೈದು ದೇಹವನ್ನು ತುಂಡರಿಸಿ ನಗರದ ಎರಡು ಕಡೆ ಎಸೆದು ಹೋಗಲಾಗಿತ್ತು.
ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕದ್ರಿ ಪಾರ್ಕ್ ಬಳಿ ಎಸೆದು ಹೋಗಿದ್ದ ಗೋಣಿಚೀಲದಲ್ಲಿ ಮಹಿಳೆಯ ರುಂಡ ಪತ್ತೆಯಾಗಿದ್ದರೆ, ಮಂಗಳಾದೇವಿಯ ನಂದಿಗುಡ್ಡದ ಬಳಿ ಸಿಕ್ಕಿದ ಗೋಣಿಚೀಲದಲ್ಲಿ ಶವದ ನಗ್ನ ದೇಹದ ಭಾಗಗಳು ಪತ್ತೆಯಾಗಿದ್ದವು.
ಇದೀಗ ನಗರದ ಮಂಗಳಾದೇವಿ ಬಳಿಯ ಅಮರ್ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶ್ರೀಮತಿ ಶೆಟ್ಟಿ ಅವರನ್ನು ಶನಿವಾರ ಕೊಲೆ ಮಾಡಿದ ದುಷ್ಕರ್ಮಿಗಳು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು. ರುಂಡದ ಭಾಗವನ್ನು ಕೆಪಿಟಿ ಜಂಕ್ಷನ್ ಬಳಿಯ ಗೂಡಂಗಡಿ ಎದುರು ಹಾಗೂ ಮುಂಡ ಮತ್ತು ಇತರೆ ಭಾಗಗಳನ್ನು ನಂದಿಗುಡ್ಡೆಯ ಕೋಟಿ ಚೆನ್ನಯ ವೃತ್ತದ ಬಳಿ ಚೀಲದಲ್ಲಿ ತುಂಬಿ ಎಸೆದಿದ್ದರು.
ಇದೀಗ ಕೊಲೆಗೆ ಸಂಬಂಧಿಸಿದಂತೆ ತನಿಖಾ ತಂಡಕ್ಕೆ ಬಲವಾದ ಸುಳಿವು ಲಭ್ಯವಾಗಿದೆ ಎಂಬ ಮಾಹಿತಿ ದೊರಕಿದೆ. ಮೃತ ಮಹಿಳೆಯ ಜೊತೆ ಸಂಪರ್ಕದಲ್ಲಿದ್ದ ಹಲವರನ್ನು ತನಿಖಾ ತಂಡ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದೆ.
ಮೇ12 ಮತ್ತು ಮೇ.13ರಂದು ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ಕೇಂದ್ರ ಉಪ ವಿಭಾಗದ ಎಸಿಪಿ ಸುಧೀರ್ ಹೆಗ್ಡೆ ಮತ್ತು ಮಂಗಳೂರು ಪೂರ್ವ (ಕದ್ರಿ) ಠಾಣೆ ಇನ್ಸ್ಪೆಕ್ಟರ್ ಮಹೇಶ್ ಸೇರಿದಂತೆ 30 ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಮೃತ ಮಹಿಳೆಯು ಶನಿವಾರ ಬೆಳಿಗ್ಗೆ ಅತ್ತಾವರದ ಕೆಎಂಸಿಯಿಂದ ಬಳಿಯಿಂದ ಬಿಳಿ ಬಣ್ಣದ ಸ್ಕೂಟರ್ ಚಲಾಯಿಸಿಕೊಂಡು ಹೊರಟಿದ್ದಾರೆ. ಅಲ್ಲಿಂದ ಮಂಗಳಾ ಬಾರ್ ಮಾರ್ಗವಾಗಿ ರೋಶನಿ ನಿಲಯದ ಎದುರು ಹೋಗಿದ್ದಾರೆ. ಮುಂದೆ ವೆಲೆನ್ಸಿಯಾ ಸರ್ಕಲ್ಗೆ ಬಂದು ಬಲಕ್ಕೆ ತಿರುಗಿ ಗೋರಿಗುಡ್ಡ ಕಡೆಗೆ ಹೋಗಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.