ಮಂಗಳೂರು, ಜೂ 27 (DaijiworldNews/MS): ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಗರದ ರೊಸಾರಿಯೋ ಬಳಿ ಬುಧವಾರ ರಾತ್ರಿ 9 ಗಂಟೆ ವೇಳೆಗೆ ನಡೆದಿದ್ದು ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಮೃತರಿಬ್ಬರು ಆಟೋ ಚಾಲಕರಾಗಿದ್ದು, ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ(46) ಹಾಗೂ ಸಕಲೇಶಪುರದ ಪಾಲ್ಯ ನಿವಾಸಿ ರಾಜು(50) ಎಂದು ಗುರುತಿಸಲಾಗಿದೆ. ರೋಸಾರಿಯೋ ಶಾಲೆಯ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಿಕ್ಷಾ ಚಾಲಕರೊಬ್ಬರು ಆಟೋ ತೊಳಿಯುತ್ತಿರುವ ಸಮಯದಲ್ಲಿ ವಿದ್ಯುತ್ ತಂತಿಯೊಂದು ಅವರ ಮೇಲೆ ಕಡಿದು ಬಿದ್ದಿದೆ ಎನ್ನಲಾಗಿದೆ. ತಕ್ಷಣ ಅವರಿಗೆ ಓರ್ವರಿಗೆ ವಿದ್ಯುತ್ ಶಾಕ್ ತಗುಲಿದ್ದು ಅದನ್ನು ಕಂಡು ಮತ್ತೊಬ್ಬ ರಿಕ್ಷಾ ಚಾಲಕರು ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಮೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳು ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.