ಮಂಗಳೂರು, ಮೇ14(Daijiworld News/SS): ಕಡಲನಗರಿ ಮಂಗಳೂರಿನಲ್ಲೂ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಇದೇ ಪ್ರಥಮ ಬಾರಿಗೆ ಉಳ್ಳಾಲ ದರ್ಗಾದ ಕೊಳವೂ ಬತ್ತಿ ಹೋಗಿದೆ.
ಉಳ್ಳಾಲ ದರ್ಗಾದ ಹೊರ ಅಂಗಣದಲ್ಲಿರುವ ಕೊಳಕ್ಕೆ ಸುಮಾರು 250 ವರ್ಷಗಳ ಇತಿಹಾಸವಿದೆ. ಈ ಕೊಳ ಸುಮಾರು 70 ಅಡಿ ಆಳವಿದ್ದು, ಮಳೆಗಾಲ ಮಾತ್ರವಲ್ಲದೆ ಬೇಸಿಗೆಯಲ್ಲೂ ಈ ಕೊಳದಲ್ಲಿ ನೀರಿಗೆ ಬರ ಇರಲಿಲ್ಲ. ಆದರೆ ಈ ಬಾರಿ ಈ ಕೊಳಕ್ಕೂ ನೀರಿನ ಬಿಸಿ ತಟ್ಟಿದೆ.
ಈ ಹಿಂದೆ ಬೇಸಿಗೆ ಕಾಲದಲ್ಲಿ ಉಳ್ಳಾಲ ದರ್ಗಾದ ಕೊಳದಲ್ಲಿ 15 ಅಡಿಯಷ್ಟು ನೀರು ಇರುತ್ತಿತ್ತು. ಆದರೆ ಈ ವರ್ಷ ನೀರು ಬತ್ತಿದ್ದು ಕೊಳದ ತಳ ಭಾಗದಲ್ಲಿ ಸ್ವಲ್ಪ ನೀರು ಮಾತ್ರ ಇದೆ.
ಈ ನಿಟ್ಟಿನಲ್ಲಿ ಈಗಾಗಲೇ ಬಹುತೇಕ ಮೀನುಗಳನ್ನು ತೆಗೆದು ವಿವಿಧ ಮಸೀದಿಗಳ ಕೆರೆ, ಬಾವಿಗಳಿಗೆ ಬಿಡಲಾಗಿದೆ. ಸದ್ಯ ಮೀನುಗಳು ಕಾಣಿಸಿಕೊಳ್ಳದಿದ್ದರೂ ಕೆಸರಲ್ಲಿ ಒಂದಷ್ಟು ಮೀನುಗಳು ಇದೆ ಎನ್ನಲಾಗಿದೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರ ನೀರಿನ ಸಮಸ್ಯೆ ಎದುರಾಗಿದೆ. ದಿನದಿಂದ ದಿನಕ್ಕೆ ನೀರಿನ ಹಾಹಾಕಾರ ಹೆಚ್ಚುತ್ತಿದ್ದು, ನೀರಿನ ಪೂರೈಕೆ ಜಟಿಲಗೊಳ್ಳುತ್ತಿದೆ. ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮಂಗಳೂರು ನಗರದಲ್ಲಿ 3 ದಿನಕ್ಕೊಮ್ಮೆ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ನೀರಿನ ಬರದ ಆತಂಕ ಮತ್ತಷ್ಟು ತೀವ್ರಗೊಂಡಿದ್ದು, ಈಗಾಗಲೇ ನೀರು ಸರಬರಾಜು ವ್ಯವಸ್ಥೆಯಲ್ಲಿ ರೇಷನಿಂಗ್ ಮಾಡಲಾಗುತ್ತಿದೆ.