ಸುಳ್ಯ, ಜೂ.26(DaijiworldNews/AA): ಅರಂತೋಡು ಗ್ರಾಮದ ಎಲ್ಪಕಜೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಆಕಾರದ ಮರ ಬಿದ್ದು, ಸಂಚಾರಕ್ಕೆ ಅಡೆಚಣೆಯಾದ ಘಟನೆ ನಡೆದಿದೆ.
ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಮರ ಬಿದ್ದಿದ್ದು, ಪರಿಣಾಮ ಸಂಚಾರ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿತ್ತು. ಮರಬಿದ್ದ ವಿಚಾರದ ಬಗ್ಗೆ ವಿನಯ್ ಅವರು ಅರಂತೋಡಿನ ತಾಜುದ್ದೀನ್ ಅರಂತೋಡು ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕೃತಿ ವಿಕೋಪ ಸಹಾಯವಾಣಿಗೆ ಕರೆ ಮಾಡಿದರು.
ತದನಂತರ ಅರಂತೋಡಿನ ಸೋಮಶೇಖರ ಪೈಕ ಅವರು ಕ್ರೇನ್ ತಂದು ಮರವನ್ನು ಬದಿಗೆ ಸರಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಮರಬಿದ್ದ ಹಿನ್ನೆಲೆಯಲ್ಲಿ ರಸ್ತೆ ಉದ್ದಕ್ಕೂ ಎರಡು ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಇನ್ನು ಮಳೆ ಧಾರಾಕಾರವಾಗಿ ಸುರಿಯುತ್ತಿದ್ದರೂ ಮರವನ್ನು ಬದಿಗೆ ಸರಿಸಲು ಪ್ರಯತ್ನ ಮಾಡಲಾಯಿತು. ಈ ಸಂದರ್ಭದಲ್ಲಿ ಲಾರಿಯೊಂದು ವೇಗವಾಗಿ ಬಂದು, ಅದರ ಚಕ್ರ ಮಣ್ಣಿನಲ್ಲಿ ಹೂತು ಹೋದ ಘಟನೆ ನಡೆದಿದೆ. ವಿನಯ್ ಎಲ್ಪಕಜೆ, ಸೋಮಶೇಖರ ಪೈಕ, ಶಿವಪ್ರಸಾದ್ ಎಲ್ಪಕಜೆ, ದೀಪಕ್ ಪೈಕ, ತಾಜುದ್ದೀನ್ ಅರಂತೋಡು ಹಾಗೂ ವಾಹನ ಚಾಲಕರು ಈ ಸಮಸ್ಯೆ ಬಗೆಹರಿಸಿದರು.