ಉಡುಪಿ,ಮೇ 14 (Daijiworld News/MSP): ಎಚ್.ಡಿ. ದೇವೇಗೌಡರು ಒಬ್ಬ ನಿಷ್ಕಳಂಕ ಹಾಗೂ ಪ್ರಾಮಾಣಿಕ ದೈವ ಭಕ್ತ ರಾಜಕಾರಣಿಯಾಗಿದ್ದು , ಅವರು ಪ್ರಧಾನಿಯಾಗಿ ಹತ್ತು ತಿಂಗಳ ಬಳಿಕವೂ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಪರಿಹಾರವಾಗುತ್ತಿತ್ತು ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಚೆನ್ನಮ್ಮ ದಂಪತಿಗಳು ಗೋವಿಂದ ಕಲ್ಯಾಣ ಮಂಟಪದಲ್ಲಿ 89ನೇ ಜನ್ಮ ನಕ್ಷತ್ರದ ಸಂಭ್ರಮದಲ್ಲಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿದ ಸಂದರ್ಭ ಮಾತನಾಡಿದರು. ದೈವ ಭಕ್ತ ರಾಜಕಾರಣಿಯಾಗಿರುವ ಎಚ್.ಡಿ. ದೇವೇಗೌಡರು ನಿಷ್ಕಳಂಕ ವ್ಯಕ್ತಿಯಾಗಿದ್ದಾರೆ. ರೈತರ ಕಾಳಜಿಗಾಗಿ ಹೋರಾಟ ಮಾಡಿದವರು. ಹಲವು ಉತ್ತಮ ಕೆಲಸಗಳ ಮಾಡುವ ಜತೆಗೆ ಹಲವು ಸಮಸ್ಯೆ ಬಗೆಹರಿಸಿದ್ದು ಅವರು ಕೆಲಕಾಲ ಪ್ರಧಾನಿಯಾಗಿ ಮುಂದುವರಿಯುತ್ತಿದ್ದರೆ ಕಾಶ್ಮೀರ ಸಮಸ್ಯೆ ಕೂಡಾ ಬಗೆಹರಿಯುತ್ತಿತ್ತು .ದೇವೇಗೌಡರ ಕುಟುಂಬದಿಂದ ಇನ್ನೂ ಕೂಡಾ ಹೆಚ್ಚಿನ ರಾಷ್ಟ್ರ ಸೇವೆ ಆಗಲಿ ಎಂದು ಶ್ರೀಗಳು ಇದೇ ವೇಳೆ ಹರಸಿದರು.
ಆ ಬಳಿಕ ವಿಧಾನಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡರ ಸಹಾಯದಿಂದ ಪಡೆದು ನಡೆದು ಬಂದ ಮಾಜಿ ಪ್ರಧಾನಿ ಆಯುರ್ವೇದ ಚಿಕಿತ್ಸೆ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಪೇಜಾವರ ಶ್ರೀಗಳು ವಿಚಾರಿಸಿದರು. ಆ ಬಳಿಕ ಶ್ರೀಗಳ ಒತ್ತಾಯದಿಂದ ಒಣಹಣ್ಣಿನ ಲಡ್ಡು, ಪಾಯಸ ಸೇವಿಸಿದರು.
ದೇವೇಗೌಡ ದಂಪತಿಗಳು ಕಳೆದ ಆರು ದಿನಗಳಿಂದ ಉಡುಪಿಯ ಸಾಯಿರಾಧಾ ರೆಸಾರ್ಟ್ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.