ಕುಂದಾಪುರ, ಜೂ.25(DaijiworldNews/AK): ಸಾರ್ವಜನಿಕರ ಕೊಂದು ಕೊರತೆಗಳನ್ನು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಉಪಸ್ಥಿತಿಯಲ್ಲಿ ಕುಂದಾಪುರ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವು ಜೂನ್ 25 ರಂದು ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸಾರ್ವಜನಿಕ ಅಹವಾಲುಗಳನ್ನು ತಾಲೂಕು ಕೇಂದ್ರದಲ್ಲಿ ಸ್ವೀಕರಿಸಿ ಅಲ್ಲಿಯೇ ಇತ್ಯರ್ಥ ಮಾಡುವ ಕಾರ್ಯಕ್ರಮ ಇದಾಗಿದ್ದು, ಚುನಾವಣಾ ನೀತಿ ಸಂಹಿತೆಯ ಕಾರಣದಿಂದ ಕುಂದಾಪುರ ತಾಲೂಕು ಮಟ್ಟದ ಜನಸ್ಪಂದನ ಸಭೆ ವಿಳಂಬವಾಯಿತು. ಇಲ್ಲಿ ಸಾರ್ವಜನಿಕರ ಅಹವಾಲುಗಳನ್ನು ದಾಖಲಿಸಿಕೊಂಡು, ಅವರಿಗೆ ಟೋಕನ್ ನೀಡಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳ ಸಮಕ್ಷಮದಲ್ಲಿ ಪರಿಹರಿಸಲಾಗುತ್ತದೆ. ಜೊತೆಗೆ ಇದಕ್ಕೆ ಸಂಬಂಧಿಸಿದ ವೆಬ್ ಪೋರ್ಟರ್ನಲ್ಲಿ ಅಪ್ ಲೋಡ್ ಮಾಡಲಾಗುತ್ತದೆ ಎಂದರು.
ಕುಂದಾಪುರ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಜನಸ್ಪಂದನ ಉತ್ತಮ ಕಾರ್ಯಕ್ರಮ. ಇದೇ ರೀತಿ ಇಲಾಖಾ ಅಧಿಕಾರಿಗಳು ದಿನನಿತ್ಯವೂ ಜನಸಮಾನ್ಯರ ಸಮಸ್ಯೆಯನ್ನು ಸುಗಮವಾಗಿ ಇತ್ಯರ್ಥಗೊಳಿಸುವ ಯೋಚನೆ, ಯೋಜನೆ ಹಾಕಿಕೊಳ್ಳಬೇಕು. ಕಂದಾಯ ಇಲಾಖೆಗೆ ಸಂಬಂಧಪಟ್ಟ ದೂರುಗಳು ನಿತ್ಯವೂ ಬರುತ್ತಾ ಇರುತ್ತದೆ. ಖಾತಾ ಬದಲಾವಣೆ, ಆರ್.ಟಿ.ಸಿ ಬದಲಾವಣೆ ಇತ್ಯಾದಿ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಮಾಡುವ ಅಥವಾ ತಾಂತ್ರಿಕವಾಗಿ ಸಮಸ್ಯೆ ಇದ್ದರೆ ಸೂಕ್ತ ಹಿಂಬರಹ ನೀಡುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ನಿತ್ಯವೂ ಬರುವ ದೂರುಗಳನ್ನು ಕ್ರಮಬದ್ಧವಾಗಿ ಪರಿಹರಿಸಿ ಜನರಿಗೆ ಅನುಕೂಲವಾಗಿ ಇಲಾಖೆಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದ ಅವರು ಇವತ್ತಿನ ಕಾರ್ಯಕ್ರಮಕ್ಕೆ ನೀಡಿದ ಪ್ರಚಾರ ಕಡಿಮೆಯಾಗಿದೆ. ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳೆ ಇದ್ದಾರೆ. ಜನರು ಹೆಚ್ಚು ಭಾಗವಹಿಸಬೇಕಿತ್ತು ಎಂದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಆಡಳಿತವನ್ನು ಜನರ ಹತ್ತಿರಕ್ಕೆ ತಗೆದುಕೊಂಡು ಜನರಿಗೆ ಅನುಕೂಲವಾಗುತ್ತದೆ. ಕೆಲವೊಂದು ಕಾರ್ಯಗಳಿಗೆ ಜನರು ಪುನಃ ಪುನಃ ಸಂಬಂಧಪಟ್ಟ ಇಲಾಕೆಗಳಿಗೆ ತಿರುಗುತ್ತಾ ಇರಬೇಕಾಗುತ್ತದೆ. ಅಲ್ಲಿನ ಸಮಸ್ಯೆ ಜನರ ಅರಿವಿಗೆ ಇರುವುದಿಲ್ಲ. ತಾಂತ್ರಿಕ ಸಮಸ್ಯೆ, ಸಿಬ್ಬಂದಿಗಳ ಕೊರತೆಯಿಂದ ಕೆಲಸ ಆಗದಿರುವಿಕೆ ಇತ್ಯಾದಿಗಳನ್ನು ತಿಳಿಸುವ ಕೆಲಸ ಆಗಬೇಕು. ಕೆಲವೊಂದು ವಿಚಾರಗಳಿಗೆ ಜಂಟಿ ಇಲಾಖೆಗಳ ಸಮನ್ವಯತೆ ಬೇಕಾಗುತ್ತದೆ. ಇದು ಜನರಿಗೆ ಅರಿವಿರುವುದಿಲ್ಲ. ಅಧಿಕಾರಿಗಳು ಜನರಿಗೆ ಆ ನಿಟ್ಟಿನಲ್ಲಿ ಸೂಕ್ತ ಸ್ಪಂದನೆ ನೀಡಬೇಕಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಸಹಾಯಕ ಆಯುಕ್ತೆ ಎಸ್.ಆರ್.ರಶ್ಮಿ ಉಪಸ್ಥಿತರಿದ್ದರು.ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಸ್ವಾಗತಿಸಿದರು. ಬಳಿಕ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಪರಿಶೀಲಿಸಲಾಯಿತು.