ಮಂಗಳೂರು,ಮೇ 14 (Daijiworld News/MSP): ಇಲ್ಲಿನ ನೀರುಮಾರ್ಗದ ಬಳಿಯ ಮಾಣೂರು ಶ್ರೀ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಕಾರ್ಯದಲ್ಲಿ ನವಿಲು ಭಾಗಿಯಾಗಿ ದೇಗುಲಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಈ ಘಟನೆ ಮೇ 12 ರ ಭಾನುವಾರ ನಡೆದಿದ್ದು, ತೈಲಾಧಿವಾಸ ಪೂಜೆ ಅದ್ದೂರಿಯಾಗಿ ನಡೆಯುತ್ತಿದ್ದ ಸಂದರ್ಭ ಶ್ರೀ ದೇವರ ವಾಹನ ನವಿಲು ಪ್ರತ್ಯಕ್ಷವಾಗಿ ಪೂಜೆಯಲ್ಲಿ ಪಾಲ್ಗೊಂಡಿದೆ.
ಚೆಂಡೆ ವಾದ್ಯಗಳ ಮೂಲಕ ದೇವಸ್ಥಾನಕ್ಕೆ ಸುತ್ತುವರಿದು ದ್ವಜಸ್ತಂಭದ ಮರಕ್ಕೆ ತೈಲಾಧಿವಾಸ ಪೂಜೆಯನ್ನು ನೆರವೇರಿಸಿದ ಬಳಿಕ ಸಂಕಲ್ಪಕ್ಕೆ ಸಾಕ್ಷಿಯಂತೆ ಸುಬ್ರಹ್ಮಣ್ಯ ದೇವರಿಗೆ ಮಂಗಳಾರತಿ ನೆರವೇರಿಸುವ ಸಂದರ್ಭದಲ್ಲಿ ಶ್ರೀ ದೇವರ ವಾಹನ ನವಿಲು ಪ್ರತ್ಯಕ್ಷವಾಗಿ ಪೂಜೆಯಲ್ಲಿ ಪಾಲ್ಗೊಂಡಿದೆ.
ದೇಗುಲಕ್ಕೆ ಪ್ರದಕ್ಷಿಣೆಹಾಕಿದ ನವಿಲು ಧ್ವಜಸ್ತಂಭಕ್ಕೆ ಪೂಜೆ ನೆರವೇರುವಾಗ ದೇಗುಲದ ಒಳಗಿನಿಂದ ನವಿಲಿನ ಜೋರಾಗಿ ಕೂಗುವ ಧ್ವನಿ ಕೇಳಿ ಭಕ್ತರಿಗೆ ಅಚ್ಚರಿಮೂಡಿತು. ಸುಬ್ರಹ್ಮಣ್ಯನಿಗೆ ಗರ್ಭಗುಡಿಯಲ್ಲಿ ಪೂಜೆ ನೆರವೇರಿದಾಗ ಮುಂಭಾಗದಲ್ಲಿ ನವಿಲು ನಿಂತಿರುವುದು ಕಂಡು ಭಕ್ತರು ಕೈಮುಗಿದು ಪ್ರಾರ್ಥಿಸಿದರು.