ಕಾರ್ಕಳ, ಜೂ.24(DaijiworldNews/AA): ಸಾಣೂರು ಮುರತ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಇದ್ದಂತಹ ಭಾರೀ ದೊಡ್ಡ ಕದಂಕಕ್ಕೆ ಮುಕ್ತಿ ದೊರೆತ್ತಿದೆ. ಇದು ಹೋರಾಟಕ್ಕೆ ಸಂದ ಜಯವೆಂದು ಸಾಣೂರು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಸಾಣೂರು-ಬಿಕರ್ನ ಕಟ್ಟೆ ರಾಷ್ಟ್ರೀಯ ಹೆದ್ದಾರಿ- 169 ಮುರತಂಗಡಿ ಪರಿಸರದಲ್ಲಿ ರಾ.ಹೆ.ಗೆ ತಾಗಿಕೊಂಡೇ ಇರುವ ದಿನಂಪ್ರತಿ 450 ವಿದ್ಯಾರ್ಥಿಗಳು ಹಾಗೂ ೫೦ ಮಂದಿ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಪ್ರತಿ ದಿನ ಓಡಾಡುವ ರಸ್ತೆಯು ಹೆದ್ದಾರಿ ಕಾಮಗಾರಿಗೆ ಸಿಲುಕಿ ತಡೆಗೋಡೆಯ ಪಕ್ಕದಲ್ಲಿಯೇ 6 ಅಡಿ ಆಳದ ಅಪಾಯಕಾರಿ ಕಂದಕ ನಿರ್ಮಾಣವಾಗಿ ಆರು ತಿಂಗಳುಗಳು ಕಳೆದಿತ್ತು.
ಈ ಹಿಂದೆ ವಿದ್ಯಾಸಂಸ್ಥೆಗೆ ಹೋಗುವ ರಸ್ತೆಯ ಡಾಮರನ್ನು ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಕೀಳಲಾಗಿದ್ದು, ಶೀಘ್ರವಾಗಿ ಡಾಮರಿಕ್ರತ ರಸ್ತೆ ಮತ್ತು ಮಳೆ ನೀರು ಹರಿದು ಹೋಗಲು ಎರಡು ಬದಿಯಲ್ಲಿ ಚರಂಡಿ ವ್ಯವಸ್ಥೆ ಮಾಡಿಕೊಡಬೇಕೆಂದು ಪ್ರಾಂಶುಪಾಲರು ಮತ್ತು ಶಾಲಾಅಭಿವೃದ್ಧಿ ಸಮಿತಿಯವರು ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ, ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಆ ಬಳಿಕ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಸಾಮಾಜಿಕ ಜಾಲತಾಣದ ಮೂಲಕ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಮತ್ತು ಗುತ್ತಿಗೆದಾರ ಕಂಪನಿಯ ಅಧಿಕಾರಿಗಳಿಗೆ ನಿರಂತರ ಒತ್ತಡ ಹಾಕಿದ ಫಲ ಸ್ವರೂಪವಾಗಿ ಇದೀಗ 6 ಅಡಿ ಆಳದ ಅಪಾಯಕಾರಿ ಕಂದಕವನ್ನು ಮಣ್ಣಿನಿಂದ ಮುಚ್ಚಲಾಗಿದೆ.
ಪ್ರಸ್ತುತ ಇರುವ ಮಣ್ಣಿನ ರಸ್ತೆಗೆ ಶೀಘ್ರವಾಗಿ ಡಾಮರೀಕರಣ ಗೊಳಿಸಿ, ಚರಂಡಿ ವ್ಯವಸ್ಥೆಯನ್ನು ಮಾಡದಿದ್ದರೆ ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ಮತ್ತೊಮ್ಮೆ ರಸ್ತೆ ತೀರಾ ಹದೆಗೆಟ್ಟು ವಿದ್ಯಾರ್ಥಿಗಳಿಗೆ ನಡೆದಾಡಲು ಆಗದ ಪರಿಸ್ಥಿತಿ.
ಇತರ ಬೇಡಿಕೆ ಪಟ್ಟಿ
- ಕಾಲೇಜು ಕಟ್ಟಡದ ಹಿಂಭಾಗದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿಯುವ ಭೀತಿ ಇರುವುದರಿಂದ ತುರ್ತಾಗಿ ಮಣ್ಣನ್ನು ತೆರೆವುಗೊಳಿಸುವ ಕಾರ್ಯವನ್ನು ಪ್ರಾರಂಭಿಸಬೇಕು.
- ನಿರಂತರ ಮಣ್ಣು ಸಾಗಾಟದಿಂದಾಗಿ ಆಟದ ಮೈದಾನದ ಮೇಲ್ಮೈ ಸಂಪೂರ್ಣವಾಗಿ ಹಾಳಾಗಿದ್ದು, ಆಟದ ಮೈದಾನದ ಸಮರ್ಪಕ ಬಳಕೆಗಾಗಿ ಮೇಲ್ಮೈಯನ್ನು ಸಮತಟ್ಟುಗೊಳಿಸಿ ಸಜ್ಜುಗೊಳಿಸಬೇಕು.
- ರಾಷ್ಟ್ರೀಯ ಹೆದ್ದಾರಿಯಿಂದ ಕಾಲೇಜಿಗೆ ಹೋಗುವ ಆರಂಭದಲ್ಲಿದ್ದ ದಾನಿಗಳು ನೀಡಿದ ಪ್ರವೇಶ ದ್ವಾರವನ್ನು ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ತೆರವುಗೊಳಿಸಿ ಈಗಾಗಲೇ ಒಂದುವರೆ ವರ್ಷ ಕಳೆದಿದ್ದು ಕೂಡಲೇ ನೂತನ ಪ್ರವೇಶ ದ್ವಾರದ ನಿರ್ಮಾಣ ಕಾರ್ಯ ಆಗಬೇಕು.
- ಬ್ಯಾಂಕ್ ಆಫ್ ಬರೋಡ ಸಾಣೂರು ಶಾಖೆಯಿಂದ ನಿರ್ಮಾಣಗೊಂಡ ಹಿಂದಿನ ಬಸ್ಸು ನಿಲ್ದಾಣವನ್ನು ಹೆದ್ದಾರಿ ಕಾಮಗಾರಿಯ ವೇಳೆ ತೆರವುಗುಗಳಿಸಲಾಗಿದ್ದು ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳು ರಸ್ತೆಯ ಅಕ್ಕಪಕ್ಕದಲ್ಲಿ ಮತ್ತು ರಸ್ತೆ ವಿಭಾಜಕದ ಮಧ್ಯ ಭಾಗದಲ್ಲಿ ನಿಂತು ಬಸ್ ಗೆ ಕಾಯುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣಗೊಂಡಿದೆ.
- ಕೂಡಲೇ ಹೊಸ ಬಸ್ಸು ನಿಲ್ದಾಣವನ್ನು ನಿರ್ಮಾಣ ಮಾಡುವ ಅವಶ್ಯಕತೆ ಇದೆ.
- ಶಾಲೆಯ ಮೂಲಭೂತ ಅವಶ್ಯಕತೆಗಳನ್ನು ನಿರ್ಮಾಣ ಮಾಡಿಕೊಡಲು ಈಗಾಗಲೇ ಬಹಳಷ್ಟು ವಿಳಂಬವಾಗಿದ್ದು ಇನ್ನಷ್ಟು ಉದಾಸೀನ ಮಾಡಿದರೆ ರಾಷ್ಟ್ರೀಯ ಹೆದ್ದಾರಿಯ ಇಲಾಖೆಯ ಕಾರ್ಯವೈಖರಿಗೆ ಬೇಸತ್ತು ವಿದ್ಯಾರ್ಥಿಗಳು, ಹೆತ್ತವರು ಮತ್ತು ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಗೆ ಇಳಿದು ಪ್ರತಿಭಟಿಸುವ ಸಿದ್ಧತೆಯನ್ನು ನಡೆಸುತ್ತಿದ್ದಾರೆ.