ಮಂಗಳೂರು, ಜೂ.24(DaijiworldNews/AA): ಪರಿಸರ ಮತ್ತು ಕಾನೂನು ನಿಯಮಗಳನ್ನು ನಿರ್ಲಕ್ಷಿಸಿ ಪಾವೂರು ಉಳಿಯ ದ್ವೀಪವನ್ನು ಮರಳು ಮಾಫಿಯಾ ಪ್ರದೇಶವಾಗಿ ಒತ್ತುವರಿ ಮಾಡಿಕೊಂಡಿಕೊಳ್ಳಲಾಗಿದೆ. ಈ ಅಕ್ರಮವನ್ನು ಬಗ್ಗೆ ಇತ್ತೀಚೆಗಷ್ಟೇ ದಾಯ್ಜಿವರ್ಲ್ಡ್ ವಾಹಿನಿಯು ಬಯಲಿಗೆಳೆದಿತ್ತು. ಇದರ ಬೆನ್ನಲ್ಲೇ ಪಾವೂರು ಉಳಿಯ ಮರಳು ಗಣಿಗಾರಿಕೆ ಪೀಡಿತ ಪ್ರದೇಶಗಳಿಗೆ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಭೇಟಿ ನೀಡಿದರು.
ಭೇಟಿಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುನೀರ್ ಕಾಟಿಪಳ್ಳ ಅವರು, ಅಕ್ರಮ ಮರಳು ಗಣಿಗಾರಿಕೆಯಲ್ಲಿ ಸರ್ಕಾರದ ಅಧಿಕಾರಿಗಳು ಶಾಮೀಲಾಗಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಬರುವ ಪಾವೂರು ಉಳಿಯದಲ್ಲಿ ಮಳೆಗಾಲದಲ್ಲಿಯೂ ಪರವಾನಗಿ ಪಡೆದ ಮರಳುಗಾರಿಕೆಯನ್ನು ನಿಷೇಧಿಸಲಾಗಿದ್ದರೂ ಮರಳು ಮಾಫಿಯಾದಂತಾ ಚಟುವಟಿಕೆಗಳು ಅವ್ಯಾಹತವಾಗಿ ಮುಂದುವರೆದಿದೆ ಎಂದು ಆರೋಪಿಸಿದ್ದಾರೆ.
ಕೊಣಾಜೆ ಠಾಣೆ ಇನ್ಸ್ ಪೆಕ್ಟರ್ ಹಾಗೂ ಸ್ಥಳೀಯ ಸಹಾಯಕ ಪೊಲೀಸ್ ಆಯುಕ್ತರನ್ನು ಕೂಡಲೇ ವಜಾಗೊಳಿಸಬೇಕು. ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ಅವರು ತಕ್ಷಣ ದ್ವೀಪಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ವೀಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು. ನಾವೆಲ್ಲರೂ ಸಮಸ್ಯೆಯನ್ನು ಪರಿಹರಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತವೆ ಎಂದು ಅವರು ಭರವಸೆ ನೀಡಿದರು.
ಕಳೆದ ಕೆಲವು ವರ್ಷಗಳ ಹಿಂದೆ ಪಾವೂರು ಉಳಿಯ ಅಕ್ರಮ ಮರಳುಗಾರಿಕೆಯಲ್ಲಿ ಕೆಥೋಲಿಕ್ ಸಭಾ ಮಧ್ಯಪ್ರವೇಶಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದನ್ನು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೋ ಅವರು ಮೆಲುಕು ಹಾಕಿದರು. ಆದಾಗ್ಯೂ, ಯಾವುದೇ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ವಹಿಸಿರಲಿಲ್ಲ.
ಇತ್ತೀಚೆಗೆ ಪತ್ರಕರ್ತರಾದ ಸ್ಟ್ಯಾನಿ ಬೇಳಾ ಮತ್ತು ದಯಾನಂದ ಕುಕ್ಕಾಜೆ ಅವರು ಸ್ಥಳಕ್ಕೆ ಭೇಟಿ ನೀಡಿ ಅಕ್ರಮ ಮರಳು ದಂಧೆಯ ಬಗ್ಗೆ ವರದಿ ಮಾಡಿದ್ದರು. ಇದರ ಬೆನ್ನಲ್ಲೇ ಮುಖಂಡರು ತಾವೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಈ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲು ಮತ್ತು ಅಕ್ರಮ ಮರಳು ಮಾಫಿಯಾ ವಿರುದ್ಧ ಹೋರಾಡಲು ಬದ್ಧರಾಗಿದ್ದಾರೆ.
ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ಡಿಸೋಜಾ, ಕ್ಯಾಥೋಲಿಕ್ ಸಭಾದ ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೋ, ಪಾವೂರು ಉಳಿಯ ಚರ್ಚ್ ನ ಪ್ಯಾರಿಷ್ ಪ್ರೀಸ್ಟ್ ಫಾ. ಮನೋಹರ್ ಡಿಸೋಜಾ, ಸಿಪಿಐಎಂ ನಾಯಕರಾದ ಸಂತೋಷ್ ಬಜಾಲ್, ಸುನಿಲ್ ಕುಮಾರ್ ಬಜಾಲ್, ಗಿಲ್ಬರ್ಟ್ ಡಿ'ಸೋಜಾ, ಫೋಕಸ್ನ ಅಧ್ಯಕ್ಷ ವಿನೋದ್ ಪಿಂಟೋ, ಮತ್ತು ಇತರರು ಉಪಸ್ಥಿತರಿದ್ದರು.