ಉಳ್ಳಾಲ, ಜೂ.24(DaijiworldNews/AK): ಬೋಳಿಯಾರು ಪ್ರಕರಣದಲ್ಲಿ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ,ಗೃಹಸಚಿವರು ಹಾಗೂ ಪೊಲೀಸ್ ಕಮೀಷನರ್ ಸಂಘಪರಿವಾರದ ಪರವಾಗಿ ಕೆಲಸ ಮಾಡುತ್ತಿದ್ದು, ಕೃತ್ಯಕ್ಕೆ ಪ್ರಚೋದಿಸಿದವರ ಬಂಧನ ನಡೆಸದೇ ಕೇವಲ ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ತಡರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಅಮಾಯಕರ ಬಂಧನ ನಡೆಸುತ್ತಿದ್ದಾರೆ. ಈವರೆಗೆ 15 ಮುಸ್ಲಿಮರನ್ನು ಬಂಧಿಸಿದರೂ ಒಬ್ಬ ಸಂಘಪರಿವಾರದ ನಾಯಕನನ್ನು ಬಂಧಿಸಿಲ್ಲ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೆಲ್ಲವನ್ನೂ ಖಂಡಿಸಿ ಸಮುದಾಯದ ಶೋಷಣೆ ವಿರುದ್ದ ಜೂ.25 ರಂದು ಸಂಜೆ 4 ಕ್ಕೆ ಕೊಣಾಜೆ ಪೊಲೀಸ್ ಠಾಣೆ ಎದುರು ಎಸ್ ಡಿಪಿಐ ನೇತೃತ್ವದಲ್ಲಿ ಪ್ರತಿಭಟನಾ ಮಾಚ್೯ ನಡೆಯಲಿದೆ ಎಂದು ಹೇಳಿದರು.
ಜೂ.9 ರಂದು ಬೋಳಿಯಾರಿನಲ್ಲಿ ಬಿಜೆಪಿ ವಿಜಯೋತ್ಸವ ಸಂದರ್ಭ ಬೋಳಿಯಾರು ಮಸೀದಿ ಮುಂದೆ ಬಂದು ಸಂಘಪರಿವಾರದ ಕಾರ್ಯಕರ್ತರು ಸಮುದಾಯವನ್ನು ಪ್ರಚೋದಿಸುವ ರೀತಿಯಲ್ಲಿ ಘೋಷಣೆಗಳನ್ನು ಕೂಗಿ, ಡಿ.ಜೆ ಡ್ಯಾನ್ಸ್ ನಡಿಸಿದ್ದಾರೆ. ಬಿಜೆಪಿ- ಸಂಘಪರಿವಾರ ಒಂದು ಸಮಯದಾಯವನ್ನು ಕೆಣಕಿಸುವ ರೀತಿಯಲ್ಲಿ ಕೋಮುಗಲಭೆಗೆ ಹುನ್ನಾರ ನಡೆಸಿಯೇ ವಿಜಯೋತ್ಸವ ನಡೆಸಿದೆ. ಆದರೆ ಪ್ರಚೋದಿಸಿದವರ ಮೇಲೆ 153(A) ಕಳಂ ನಡಿ ಪ್ರಕರಣ ದಾಖಲಿಸಿದ್ದರೂ, ಪೊಲೀಸರು ಯಾರನ್ನೂ ಬಂಧಿಸದೆ ಕೇವಲ ಬೋಳಿಯಾರಿನಲ್ಲಿರುವ ಮುಸ್ಲಿಂ ಮನೆಗಳಿಗೆ ಮನೆಗಳಿಗೆ ದಾಳಿ ನಡಿಸಿ ಈವರೆಗೆ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಮುಸ್ಲಿಂ ಶಾಸಕನಿರುವ ಕ್ಷೇತ್ರದಲ್ಲಿ ಪೊಲೀಸರು ಉತ್ತರ ಪ್ರದೇಶ, ಬಿಹಾರ ಮಾದರಿಯಲ್ಲಿ ಮುಸ್ಲಿಮರ ಮನೆಗಳಿಗೆ ದಾಳಿ ನಡೆಸಲಾಗುತ್ತಿದೆ. ಅಲ್ಲಿ ಯುವಕರು ಸಿಗದೇ ಇದ್ದಲ್ಲಿ ವೃದ್ದೆ ತಾಯಿ, ಮಕ್ಕಳು, ರೋಗಿ ಮಹಿಳೆಯರನ್ನೂ ಠಾಣೆಗೆ ತಂದು ಎರಡು ದಿನ ಎರಡು ರಾತ್ರಿ ಕುಳಿತುಕೊಳ್ಳುವಂತೆ ಇಲಾಖೆ ಮಾಡಿದೆ. ಪೊಲೀಸರು ಯಾರನ್ನಾದರೂ ವಶಕ್ಕೆ ಪಡೆದುಕೊಂಡರೆ 24 ಗಂಟೆಯೊಳಗೆ ಮನೆಗೆ ಮಾಹಿತಿ ಅಥವಾ ಬಿಡುಗಡೆ ಮಾಡಬೇಕಿದೆ. ಅದನ್ನು ಮಾಡದೇ ಜಿಲ್ಲೆಯಿಡೀ ಪೊಲೀಸ್ ರಾಜ್ ನಂತೆ ವರ್ತಿಸುತ್ತಿದೆ. ಶೇ.85 ಮುಸಲ್ಮಾನರ ಮತದಿಂದಲೇ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಸಿದ್ಧರಾಮಯ್ಯ ಸರಕಾರ ಹಳೆಯ ಬೊಮ್ಮಾಯಿ ಸರಕಾರದಂತೆ ಕಾರ್ಯಾಚರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.ನಿನ್ನೆ ರಾತ್ರಿಯೂ ಅಮಾಯಕ ರಶೀದ್ ಎಂಬಾತನನ್ನು ಕೊಣಾಜೆ ಪೊಲೀಸರು ವಶಕ್ಕೆ ತೆಗೆದುಕೊಂಡು ಠಾಣೆಯಲ್ಲಿ ಕೂಡಿ ಹಾಕಿದ್ದಾರೆ.
ಪ್ರಚೋದಿಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದರೂ , ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿದ್ದರೂ ಈವರೆಗೆ ಇಲಾಖೆ ಬಂಧಿಸಲು ಮುಂದಾಗಿಲ್ಲ. ರಾಜ್ಯ ಸರಕಾರ ಸಂಘಪರಿವಾರ ತೃಪ್ತಿಪಡಿಸಲು ಕಾರ್ಯಚರಿಸುತ್ತಿದೆ. ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬಹುದಾದ ಸ್ಥಳೀಯ ಶಾಸಕರು ವಿದೇಶದಲ್ಲಿ ಹೋಗಿ ಕುಳಿತಿದ್ದಾರೆ. ಸಮತೋಲನದ ರಾಜಕೀಯ ನಡೆಸುವ ರಾಜ್ಯ ಸರಕಾರ ತಕ್ಷಣ ಮುಸ್ಲಿಂ ಬೇಟೆ ನಿಲ್ಲಿಸಬೇಕಿದೆ ಎಂದರು
ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ದುಡಿದವರು ಹಾಗೂ ಮತಹಾಕಿದವರೇ ಇಂದು ಜೈಲುಪಾಲಾಗಿದ್ದಾರೆ. ಈವರೆಗೂ ಕಾಂಗ್ರೆಸ್ ನಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ ವ್ಯಕ್ತಿ ಬೋಳಿಯಾರಿನಲ್ಲಿ ಕಾಣಲೇ ಇಲ್ಲ. ಕಾಂಗ್ರೆಸ್ಸಿಗೆ ಜೈಕಾರ ಹಾಕಿದರೂ, ಪಾಕಿಸ್ತಾನ ಜಿಂದಾಬಾದ್ ಹೇಳಿದರೆಂದು ಮುಸ್ಲಿಂ ನಾಯಕರನ್ನು ಬಂಧಿಸುವ ಸರಕಾರ ಮುಸ್ಲಿಂ ವಿರೋಧಿಯಾಗಿ ವರ್ತಿಸುತ್ತಿದೆ. ತಡರಾತ್ರಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗದ ಇಲಾಖೆ ಮುಸ್ಲಿಮರ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಇದನ್ನು ನಡೆಸುವಂತೆ ಇಲಾಖೆ ಮೇಲೆ ಒತ್ತಡ ಹೇರುತ್ತಿರುವವರು ಯಾರು? ಶಾಸಕ ಯು.ಟಿ ಖಾದರ್, ಗೃಹಸಚಿವ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪೊಲೀಸ್ ಇಲಾಖೆಯನ್ನು ಸಂಘಪರಿವಾರದ ಪರವಾಗಿ ಕಾರ್ಯನಿರ್ವಹಿಸುವಂತೆ ಮಾಡಿದೆ.
ಇದರ ಹಿಂದೆ ಬೇರೆ ಯಾವುದೋ ಉದ್ದೇಶ ಇರುವುದು ಸ್ಪಷ್ಟ. ಪೊಲೀಸ್ ಕಾಲರ್ ಹಿಡಿದಂತಹ ಶಾಸಕ ಹರೀಶ್ ಪೂಂಜನನ್ನು ಬಂಧಿಸದ ಸರಕಾರ ಅಮಾಯಕರನ್ನು ಬಂಧಿಸುತ್ತಿರುವುದು ಸರಕಾರದ. ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಬಿಜೆಪಿ ಕಾರ್ಯಕರ್ತರ ಪ್ರಕರಣಕ್ಕೆ ನ್ಯಾಯಾಲಯ ರಿಲೀಫ್ ನೀಡಿರಲು ಸರಕಾರದ ಪ್ರಾಸಿಕ್ಯೂಷನ್ ವೈಫಲ್ಯನೇ ಕಾರಣ.
ಸಂಘಪರಿವಾರದ ಪ್ರಯೋಗಶಾಲೆಗೆ ಸರಕಾರ ಬೆಂಬಲಿಸುವುದಾದಲ್ಲಿ ಜಿಲ್ಲೆಯ ಅಲ್ಪಸಂಖ್ಯಾತರು ಒಟ್ಟಾಗಲಿದ್ದಾರೆ ಎಚ್ಚರಿಸಿ ನಾಳೆ ಕೊಣಾಜೆಯಲ್ಲಿ ಸಂಜೆ 4 ಕ್ಕೆ ಪ್ರತಿಭಟನಾ ಮಾಚ್೯ ನಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು.
ತಡರಾತ್ರಿ 12 ಗಂಟೆ ಮನೆಗೆ ನುಗ್ಗಿ ಮಹಿಳಾ ಪೊಲೀಸರನ್ನು ತರದೇ ಏಕಾಏಕಿ ಮಹಿಳೆಯರು ಮಕ್ಕಳನ್ನು ಬೆದರಿಸಿ ಪತಿಯನ್ನು ಕೊಂಡುಹೋಗಿ ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ಎಫ್ ಐಆರ್ ಅನ್ನು ದಾಖಲಿಸಿದ್ದಾರೆ. ಇಂತಹ ಪೊಲೀಸ್ ದೌರ್ಜನ್ಯ ವಿರುದ್ದ ಮಾನವ ಹಕ್ಕು, ಮಹಿಳಾ ಆಯೋಗ, ಮಕ್ಕಳ ಆಯೋಗ ಮಧ್ಯಪ್ರವೇಶಿಸಬೇಕು ಬಂಧಿತ ಸಿರಾಜ್ ಪತ್ನಿ ಖೈರುನ್ನೀಸ ಒತ್ತಾಯಿಸಿದರು.