ಮಂಗಳೂರು, ಮೇ 14 (Daijiworld News/MSP): ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಿಂದನಾತ್ಮಕ ಬರಹ ಹಾಗೂ ಚಿತ್ರವನ್ನು ಟ್ವೀಟ್ ಮಾಡಿದ ಆರೋಪದ ಮೇಲೆ ಭಾರತೀಯ ಯುವ ಕಾಂಗ್ರೆಸ್ ಪ್ರಚಾರ ಅಭಿಯಾನದ ಉಸ್ತುವಾರಿ ಶ್ರೀವಾತ್ಸವ ಅಲಿಯಾಸ್ ಶ್ರೀವಾಸ್ತವ್ ವೈ.ಬಿ. ಎಂಬವರ ವಿರುದ್ಧ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವಕ್ತಾರ ವಿಕಾಸ್ ಪಿ. ಮಂಗಳೂರು ಬಂದರು ಪೊಲೀಸ್ ಠಾಣೆಗೆ ಮೇ. 13 ರ ಸೋಮವಾರ ದೂರು ನೀಡಿದ್ದಾರೆ.
‘ಶ್ರೀವಾಸ್ತವ್ ಅವರು ಪ್ರಧಾನಿ ಮೋದಿ ಅವರನ್ನು ಹಿಟ್ಲರ್ ಹೋಲಿಸಿದ್ದಲ್ಲದೆ, ಪ್ರಧಾನಿ ಭಾವಚಿತ್ರವನ್ನು ವಿರೂಪಗೊಳಿಸಿ ನಿಂದನಾತ್ಮಕ ಬರಹ ಬರೆದಿದ್ದರು. ಈ ರೀತಿ ಜಾಲತಾಣಗಳಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡುತ್ತಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ವಿಕಾಸ್ ದೂರಿನಲ್ಲಿ ಆಗ್ರಹಿಸಿದ್ದಾರೆ.