ವಿಟ್ಲ, ಮೇ 13 (Daijiworld News/SM): ಕೇರಳ ಭಾಗದಿಂದ ಅತಿಯಾದ ವೇಗದಲ್ಲಿ ಬರುತ್ತಿದ್ದ ವಾಹನವೊಂದನ್ನು ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ನಿಲ್ಲಿಸಿದ ಸಮಯ ಹುಡುಗಿಯೊಬ್ಬಳ ಅಪಹರಣ ಶಂಕೆಯಿಂದ ಹಿಂದಿನಿಂದ ಹಿಂಬಲಿಸಿಕೊಂಡು ಬಂದ ವಾಹನದವರು ಗಲಾಟೆಗೆ ಮುಂದಾಗಿದ್ದು ಈ ಸಂದರ್ಭ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡ ಘಟನೆ ಮೇ 13ರ ಸೋಮವಾರ ರಾತ್ರಿ ನಡೆದಿದೆ.
ಪರಿಸ್ಥಿತಿ ನಿಯಂತ್ರಿಸಲು ವಿಟ್ಲ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಕೂಡ ನಡೆದಿದೆ. ಘಟನೆಯಲ್ಲಿ ಪ್ರೊಬೆಷನರಿ ಎಸೈ ಗಾಯಗೊಂಡಿದ್ದಾರೆ.
ಕೇರಳದ ಕಳತ್ತೂರು ಭಾಗದ ಹುಡುಗಿಯೊಬ್ಬಳನ್ನು ಅಪಹರಣ ಮಾಡಿದ ಬಗ್ಗೆ ಬೆಳಗ್ಗಿನಿಂದಲೇ ಸುದ್ದಿ ಹರಡುತ್ತಿತ್ತು. ಈ ಹಿನ್ನೆಲೆ ಗಡಿ ಭಾಗದಲ್ಲಿ ಹಲವು ಮಂದಿ ಪಹರೆ ಕಾಯುತ್ತಿದ್ದರು. ಮುಸ್ಸಂಜೆ ಸಮಯದಲ್ಲಿ ಪೆರ್ಲದಿಂದ ಬೊಲೆರೋ ಒಂದು ಅತಿಯಾದ ವೇಗದಲ್ಲಿ ವಿಟ್ಲ ಕಡೆಗೆ ಹೋಗುವುದನ್ನು ಹಲವರು ಗಮನಿಸಿ ಅಪರಣಕಾರರ ವಾಹನ ಇರಬಹುದೆಂದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆನ್ನಲಾಗಿದೆ.
ಆದರೆ ಬೊಲೆರೋ ಚಾಲಕ ಯಾರ ಸೂಚನೆಗೂ ಬೆಲೆ ಕೊಡದೆ ಹಲವು ವಾಹನಗಳಿಗೆ ಉಜ್ಜಿಕೊಂಡು ಬರುವ ಯತ್ನ ಮಾಡಿದ್ದಾನೆನ್ನಲಾಗಿದೆ. ಇದರಿಂದ ಆ ಭಾಗದ ಒಂದಷ್ಟು ಜನರು ವಾಹನಗಳನ್ನು ಹಿಡಿದುಕೊಂಡು ಬೊಲೆರೋವನ್ನು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಜತೆಗೆ ಅಡ್ಯನಡ್ಕ ಭಾಗದ ಕೆಲವು ಹುಡುಗರಿಗೂ ವಾಹನವನ್ನು ತಡೆಯುವಂತೆ ಮಾಹಿತಿ ರವಾನಿಸಿದ್ದಾರೆನ್ನಲಾಗಿದೆ.
ಸಾರಡ್ಕದಲ್ಲಿ ವಾಹನ ನಿಲ್ಲಿಸುತ್ತಿದ್ದಂತೆ, ಮಾತುಕತೆಗೆ ಮುಂದಾಗುವ ಬದಲಾಗಿ ನೇರ ಬೊಲೆರೋದಲ್ಲಿದ್ದವರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಬೊಲೆರೋವನ್ನು ಮಗುಚಿ ಹಾಕುವ ಹಂತದವರೆಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಲಾಠಿ ಪ್ರಹಾರ ಆರಂಭವಾಗುತ್ತಿದ್ದ ಹಾಗೆ ವಾಹನಗಳನ್ನು ಸ್ಥಳದಲ್ಲಿ ಬಿಟ್ಟು, ಹಲವು ಮಂದಿ ಪರಾರಿಯಾಗಿದ್ದಾರೆ. ಕೆಲವು ದ್ವಿಚಕ್ರ ವಾಹನಗಳು ಚರಂಡಿಗೆ ತಳ್ಳಲ್ಪಟ್ಟಿತ್ತು. ಸುಮಾರು ೫ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನ ಮಾಲಕರನ್ನು ಪ್ರಕರಣದ ಸ್ಪಷ್ಟತೆ ತೆಗೆದುಕೊಳ್ಳುವ ದೃಷ್ಠಿಯಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಶರಣ ಗೌಡ ನೇತೃತ್ವದ ವಿಟ್ಲ ಪ್ರೊಬೆಷನರಿ ಎಸೈಗಳಾದ ಕೀರ್ತಿ ಕುಮಾರ್ ಹಾಗೂ ರಾಜೇಶ್ ಅವರನ್ನೊಳೊಂಡ ವಿಟ್ಲ ಪೊಲೀಸರ ತಂಡ ಸ್ಥಳದಲ್ಲಿ ಬೀಡು ಬಿಟ್ಟು ಪರಿಸ್ಥಿಯನ್ನು ತಿಳಿಗೊಳಿಸಿದ್ದಾರೆ. ಬದಿಯಡ್ಕ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಅಪಹರಣವಾದ ಹುಡುಗಿ ಕೇರಳದಲ್ಲಿ ಪತ್ತೆಯಾಗಿದ್ದು, ಬೊಲೆರೋ ವಾಹನ ದಾರಿ ತಪ್ಪಿ ವಿಟ್ಲ ಕಡೆಗೆ ಆಗಮಿಸಿದೆ ಎನ್ನಲಾಗಿದೆ.