ಉಡುಪಿ, ಜೂ. 18(DaijiworldNews/AA): ಸೆಲೂನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚರಣ್ ಯು.(18) ಹಾಗೂ ಸ್ನೇಹಿತರ ಮೇಲೆ ಯುವಕರ ಗುಂಪೊಂದು ತಲವಾರಗಳಿಂದ ದಾಳಿ ನಡೆಸುವುದರ ಜೊತೆಗೆ ಬಿಯರ್ ಬಾಟಲಿಗಳಿಂದ ಕೂಡ ಹಲ್ಲೆ ಮಾಡಲು ಪ್ರಯತ್ನಿಸಿದ ಘಟನೆ ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಜೂನ್ 15 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಬಡಗುಬೆಟ್ಟಿನ ಪ್ರವೀಣ್(22), ಕಟಪಾಡಿಯ ಅಭಿಷೇಕ್(28), ಪುತ್ತೂರಿನ ದೇಶರಾಜ್(18) ಇವರುಗಳನ್ನು ದಸ್ತಗಿರಿ ಮಾಡಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೋರ್ವ ಅಪ್ರಾಪ್ತ ಬಾಲಕನನ್ನು ವಿಚಾರಣೆ ನಡೆಸಿ ಕಾನೂನಿನಂತೆ ಕ್ರಮ ಜರುಗಿಸಲಾಗಿರುತ್ತದೆ.
ಜೂ. 15ರಂದು ಸೆಲೂನ್ನಲ್ಲಿ ಅವರು ಕೆಲಸ ಮಾಡಿಕೊಂಡಿದ್ದ ವೇಳೆ ಅಭಿಷೇಕ್ ಕಟಪಾಡಿ ಅವರು ಕರೆ ಮಾಡಿ ಶಬರಿ ಎಂಬವನ ಬಗ್ಗೆ ಮಾತನಾಡಬೇಕಾಗಿದೆ. ತತ್ಕ್ಷಣ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಬರುವಂತೆ ತಿಳಿಸಿದ್ದಾನೆ. ಅದರಂತೆ ಚರಣ್ ಅವರು ಸುಜನ್ ಎಂಬಾತನ ಬೈಕ್ನಲ್ಲಿ ಹೋಗಿದ್ದರು. ಇವರ ಗೆಳೆಯರಾದ ನಾಗರಾಜ್, ಕಾರ್ತಿಕ್, ರಂಜು ಅವರು ಮತ್ತೊಂದು ಸ್ಕೂಟಿಯಲ್ಲಿ ಹೊರಟು ಬಿರಿಯಾನಿ ಪಾಯಿಂಟ್ ಗಿಂತ ಸ್ವಲ್ಪ ಮುಂದೆ ಗೂಡಂಗಡಿ ಬಳಿಗೆ ತೆರಳಿದ್ದರು. ಈ ವೇಳೆ ಅಲ್ಲಿ ಪ್ರವೀಣ್, ಅಭಿಷೇಕ್ ಕಟಪಾಡಿ, ದೇಶರಾಜ್, ಶಬರಿ ಮತ್ತು ಪರಿಚಯವಿಲ್ಲದ ಇತರ ಇಬ್ಬರು ಅಲ್ಲಿಯೇ ನಿಂತಿದ್ದ ರಿಕ್ಷಾಗೆ ಒರಗಿಕೊಂಡು, ಕೈಯಲ್ಲಿ ತಲವಾರು ಹಿಡಿದುಕೊಂಡು ನಿಂತಿದ್ದರು. ಚರಣ್ ಮತ್ತು ಆತನ ಗೆಳೆಯರನ್ನು ನೋಡಿದ ತಕ್ಷಣ ಕೊಲ್ಲುವ ಉದ್ದೇಶದಿಂದ ಎದುರು ಬಂದು ತಲವಾರು ಬೀಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಚರಣ್ ಮತ್ತು ಗೆಳೆಯರು ಬೈಕ್ ಮತ್ತು ಸ್ಕೂಟಿಯನ್ನು ಅಲ್ಲಿಯೇ ಬಿಟ್ಟು ಅವರಿಂದ ತಪ್ಪಿಸಿಕೊಂಡು ಓಡಿ ಹೋಗುವಾಗ ಬಿಯರ್ ಬಾಟಲಿಗಳನ್ನು ಬಿಸಾಡಿದ್ದಾರೆ. ಅನಂತರ ರಾತ್ರಿ 10 ಗಂಟೆಗೆ ಚರಣ್ ಹಾಗೂ ಸ್ನೇಹಿತರು ಪುನಹ ತಾವು ಬಿಟ್ಟು ಹೋಗಿದ್ದ ಬೈಕ್ ಹಾಗೂ ಸ್ಕೂಟಿಯನ್ನು ಕೊಂಡು ಹೋಗಲು ಹೋದಾಗ ಆರೋಪಿಗಳು ಇವರ ದ್ವಿಚಕ್ರ ವಾಹನವನ್ನು ಹಾನಿಗೊಳಿಸಿ 25 ಸಾವಿರ ರೂ. ನಷ್ಟ ಉಂಟು ಮಾಡಿದ್ದಾರೆ. ಸುಜನ್ನ ಸ್ಕೂಟಿಯನ್ನು ದೂಡಿ ಹಾಕಿದ್ದಾರೆ. ಶಬರಿ ಎಂಬವನಿಗೆ ಚರಣ್ ನಿಂದಿಸಿದ ಕಾರಣ ಮುಂದಿಟ್ಟುಕೊಂಡು, ಹಳೇ ದ್ವೇಷದಿಂದ ಪ್ರವೀಣ್ ಮತ್ತು ಇತರ ೫ ಮಂದಿ ಸೇರಿ ಕೊಲ್ಲುವ ಉದ್ದೇಶದಿಂದ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಉಡುಪಿ ನಗರ ಠಾಣೆಯಲ್ಲಿ ಚರಣ್ ಅವರು ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 148, 427, 307, 149 ಹಾಗೂ ಸೆಕ್ಷನ್ 27ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.