ಮಂಗಳೂರು, ಜೂ. 18(DaijiworldNews/AA): ಸ್ಯಾಂಡಿಸ್ ಕಂಪನಿ ಆಯೋಜಿಸಿರುವ ಸಿನಿ ಗ್ಯಾಲಕ್ಸಿ ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ 2024ರ 3ನೇ ಆವೃತ್ತಿಯು ಜೂನ್ 16 ರಂದು ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಯಿತು.
ಸ್ಯಾಂಡಿಸ್ ಕಂಪನಿಯ ಆಡಳಿತ ನಿರ್ದೇಶಕ ಸಂದೇಶ್ ರಾಜ್ ಬಂಗೇರ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಸ್ಯಾಂಡೀಸ್ ಕಂಪನಿಯು ಕಳೆದೆರಡು ಆವೃತ್ತಿಗಳಲ್ಲಿ ಕರಾವಳಿ ಚಲನಚಿತ್ರ ಪ್ರಶಸ್ತಿಗಳನ್ನು ನೀಡುವ ಮೂಲಕ ಯಶಸ್ವೀ ಕಾರ್ಯಕ್ರಮ ಆಯೋಜಿಸಿತ್ತು. ಈ ಬಾರಿಯ 3ನೇ ಆವೃತ್ತಿಯಲ್ಲಿಯೂ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಬಹುಮುಖ ನಟ ಪ್ರಶಸ್ತಿ ಸೇರಿದಂತೆ 30 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು.
ಕೋಸ್ಟಲ್ವುಡ್ ಮತ್ತು ಸ್ಯಾಂಡಲ್ವುಡ್ನ ಹಲವಾರು ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು ತಮ್ಮ ನೃತ್ಯ ಪ್ರದರ್ಶನಗಳೊಂದಿಗೆ ನೆರೆದಿದ್ದವರನ್ನು ರಂಜಿಸಿದರು.
ಈ ಸಂದರ್ಭ ವಿಜಯ್ ರಾಘವೇಂದ್ರ, ಸಿದ್ದು ಮೂಲಿಮನಿ, ಅನುರಾಧ ಭಟ್, ರೂಪೇಶ್ ಶೆಟ್ಟಿ, ಮತ್ತು ಪ್ರಥ್ವಿ ಅಂಬಾರ್ ಮುಂತಾದ ಗಣ್ಯರು ಹಾಜರಿದ್ದರು.
ದಾಯ್ಜಿವರ್ಲ್ಡ್ ಟಿವಿ 24×7 ಈ ಗ್ರ್ಯಾಂಡ್ ಈವೆಂಟ್ಗೆ ಅಧಿಕೃತ ಮಾಧ್ಯಮ ಪಾಲುದಾರರಾಗಿದ್ದರು. ಸಂದೇಶ್ ರಾಜ್ ಬಂಗೇರ ಅವರ ನೇತೃತ್ವದಲ್ಲಿ, ಸ್ಯಾಂಡಿಸ್ ಕಂಪನಿಯು ಪ್ರಾರಂಭದಿಂದಲೂ ಅವಿರತವಾಗಿ ಶ್ರಮಿಸುತ್ತಿದ್ದು, ಕೋಸ್ಟಲ್ ಫಿಲ್ಮ್ ಅವಾರ್ಡ್ಸ್ ಮತ್ತು ಯುವ ದಸರಾ ಗೋಷ್ಠಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಸಂದೇಶ್ ರಾಜ್ ಬಂಗೇರ ಅವರು ಪಿಲಿಬೈಲ್ ಯಮುನಕ್ಕ ಮತ್ತು ರಡ್ಡ್ ಎಕ್ಕೆರೆ ಎಂಬ ಎರಡು ತುಳು ಸಿನಿಮಾಗಳನ್ನೂ ನಿರ್ಮಿಸಿದ್ದಾರೆ.
ರೂಪೇಶ್ ಶೆಟ್ಟಿ ಅವರು 'ಸರ್ಕಸ್' ಚಿತ್ರದಲ್ಲಿನ ನಟನೆಯಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು, 'ಸರ್ಕಸ್' ಚಿತ್ರಕ್ಕಾಗಿ ರಚನಾ ರೈ ಅವರು ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಯನ್ನು ಪಡೆದರು. ಜೀವಮಾನ ಸಾಧನೆ ಪ್ರಶಸ್ತಿಯನ್ನು ರಾಮ್ ಶೆಟ್ಟಿ ಅವರಿಗೆ ಲಭಿಸಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ 'ಗೌಜಿ ಗಮ್ಮತ್'ಗೆ ಲಭಿಸಿದರೆ, 'ಸರ್ಕಸ್' ಚಿತ್ರಕ್ಕೆ ಅತ್ಯುತ್ತಮ ಜನಪ್ರಿಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ತೀರ್ಪುಗಾರರ ವಿಶೇಷ ಪ್ರಶಸ್ತಿಗಳಾದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು 'ಕೋರಮ್ಮ' ಚಿತ್ರಕ್ಕೆ, ಅತ್ಯುತ್ತಮ ನಟ ಪ್ರಶಸ್ತಿಯನ್ನು 'ಕೋರಮ್ಮ' ಚಿತ್ರಕ್ಕಾಗಿ ಮೋಹನ್ ಶೇಣಿ ಅವರಿಗೆ ಹಾಗೂ 'ಯಾನ್ ಸೂಪರ್ ಸ್ಟಾರ್' ಚಿತ್ರಕ್ಕಾಗಿ ದಯಾನಂದ ಶೆಟ್ಟಿ ಅವರಿಗೆ ಲಭಿಸಿದೆ. ಇನ್ನು ರೂಪಶ್ರೀ ವರ್ಕಾಡಿ ಅವರು ಅತ್ಯುತ್ತಮ ಬಹುಮುಖ ಪ್ರತಿಭೆ ಪ್ರಶಸ್ತಿ ಪಡೆದರು.
'ಕೋರಮ್ಮ' ಚಿತ್ರಕ್ಕಾಗಿ ಶಿವದ್ವಜ್ ಶೆಟ್ಟಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡರು. 'ರಾಪಟ' ಚಿತ್ರಕ್ಕಾಗಿ ಯಶ್ವಿನ್ ಕೆ ಶೆಟ್ಟಿಗಾರ್ ಅವರು ಅತ್ಯುತ್ತಮ ಸಂಕಲನಕಾರ ಪ್ರಶಸ್ತಿ ಪಡೆದರೆ ದೇವದಾಸ್ ಕಾಪಿಕಾಡ್ ಅವರು ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನು ಪಡೆದರು. 'ಸರ್ಕಸ್' ಚಿತ್ರಕ್ಕಾಗಿ ಪ್ರಸನ್ನ ಶೆಟ್ಟಿ ಅತ್ಯುತ್ತಮ ಸಂಭಾಷಣೆಗಾರ ಪ್ರಶಸ್ತಿ ಪಡೆದರು. 'ಪುಳಿಮುಂಚಿ' ಚಿತ್ರಕ್ಕಾಗಿ ಚಂದ್ರ ಬಂಡೆ ಅತ್ಯುತ್ತಮ ಆಕ್ಷನ್ ಪ್ರಶಸ್ತಿ ಪಡೆದರೆ, ರಾಜೇಶ್ ಬೈಂದೂರು ಮತ್ತು ಹರೀಶ್ ನಾಯ್ಕ್ ಬಜ್ಪೆ ಅವರು ಅತ್ಯುತ್ತಮ ಕಲಾ ನಿರ್ದೇಶನ ಪ್ರಶಸ್ತಿ ಪಡೆದರು. 'ಸರ್ಕಸ್' ಚಿತ್ರಕ್ಕಾಗಿ ಲಾಯ್ ವ್ಯಾಲೆಂಟೈನ್ ಸಲ್ಡಾನಾ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಯನ್ನು ಪಡೆದಿದ್ದು, 'ರಾಪಟ' ಚಿತ್ರಕ್ಕಾಗಿ ಸಚಿನ್ ಶೆಟ್ಟಿ ಅತ್ಯುತ್ತಮ ಛಾಯಾಗ್ರಹಕ ಪ್ರಶಸ್ತಿ ಪಡೆದರು.
'ಗೌಜಿ ಗಮ್ಮತ್' ಚಿತ್ರಕ್ಕಾಗಿ ಮಣಿ ಎಜೆ ಕಾರ್ತಿಕೇಯನ್ ಅತ್ಯುತ್ತಮ ಕಥೆಗಾಗಿ ಪ್ರಶಸ್ತಿ ಪಡೆದರು. 'ಗೋಸ್ಮಾರಿ ಫ್ಯಾಮಿಲಿ' ಚಿತ್ರಕ್ಕಾಗಿ ಸಚಿನ್ ಪೂಜಾರಿ ಅತ್ಯುತ್ತಮ ನೃತ್ಯ ನಿರ್ದೇಶನ ಪ್ರಶಸ್ತಿ ಪಡೆದರು. 'ಯಾನ್ ಸೂಪರ್ ಸ್ಟಾರ್' ಚಿತ್ರಕ್ಕಾಗಿ ಆರುಷ್ ಪೂಜಾರಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ ಪಡೆದರು. 'ಗೌಜಿ ಗಮ್ಮತ್' ಚಿತ್ರಕ್ಕಾಗಿ ದೇವದಾಸ್ ಕಾಪಿಕಾಡ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದರೆ, 'ಪುಳಿಮುಂಚಿ' ಚಿತ್ರಕ್ಕಾಗಿ ನಮಿತಾ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದರು. 'ಪಿಲಿ' ಚಿತ್ರಕ್ಕಾಗಿ ಕೆ.ಕೆ.ಪೇಜಾವರ್ ಅವರಿಗೆ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿ ಲಭಿಸಿದೆ. ಆಕಾಶ್ ಪ್ರಜಾಪತಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು. 'ಪಿಲಿ' ಚಿತ್ರಕ್ಕಾಗಿ ಅನುರಾಧಾ ಭಟ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಲಭಿಸಿದರೆ, 'ಸರ್ಕಸ್' ಚಿತ್ರಕ್ಕಾಗಿ ನಿಹಾಲ್ ತೌರೊ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಲಭಿಸಿದೆ.
'ಪುಲಿಮುಂಚಿ' ಚಿತ್ರಕ್ಕಾಗಿ ಅರವಿಂದ್ ಬೋಳಾರ್ ಅವರಿಗೆ ಕಾಮಿಕ್ ಪಾತ್ರದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಸ್ತಿ ಲಭಿಸಿದೆ. 'ಪುಲಿಮುಂಚಿ' ಚಿತ್ರಕ್ಕಾಗಿ ನೆಗೆಟಿವ್ ಪಾತ್ರದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಸ್ವರಾಜ್ ಶೆಟ್ಟಿ ಪ್ರಶಸ್ತಿ ಪಡೆದರು. ಕರುಣಾಕರ್ ಅವರು 'ಗೌಜಿ ಗಮ್ಮತ್' ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಪಡೆದರೆ, 'ಗೋಸ್ಮಾರಿ ಫ್ಯಾಮಿಲಿ' ಚಿತ್ರಕ್ಕಾಗಿ ಸಮತಾ ಅಮೀನ್ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ಪಡೆದರು. 'ಸರ್ಕಸ್' ಚಿತ್ರಕ್ಕಾಗಿ ತಿಲಕ್ ಆಚಾರ್ಯ ಅತ್ಯುತ್ತಮ ಪ್ರಚಾರ ವಿನ್ಯಾಸಕ ಪ್ರಶಸ್ತಿ ಪಡೆದರು.
ಕಾರ್ಯಕ್ರಮವನ್ನು ಸೌಜನ್ಯ ಹೆಗ್ಡೆ, ಚೇತನ್ ಶೆಟ್ಟಿ, ಶರ್ಮಿಳಾ ಅಮೀನ್ ಅವರು ನಿರೂಪಿಸಿದರು.