ಕುಂದಾಪುರ, ಜೂ. 17(DaijiworldNews/AK): ಕುಂದಾಪುರ ರೈಲು ನಿಲ್ದಾಣದಲ್ಲಿ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ನಿರಂತರ ಹೋರಾಟದಿಂದ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಕೆಲವೊಂದು ಕೆಲಸಗಳನ್ನು ಮಾತ್ರ ಸರಕಾರ ಮಾಡಲು ಸಾಧ್ಯವಿದೆ. ಪ್ರಯಾಣಿಕರ ಶೆಲ್ಟರ್ನಂತಹ ಸೌಲಭ್ಯಗಳ ಅನುಕೂಲತೆಗಳನ್ನು ಮಾಡಿಕೊಡುತ್ತಿರುವುದು ಶ್ಲಾಘನಾರ್ಹ. ರೈಲ್ವೆ ನಿಲ್ದಾಣಗಳ ಉನ್ನತೀಕರಣ, ಹೊಸ ರೈಲುಗಳ ಅಳವಡಿಕೆ, ನಿಲ್ದಾಣ ವಿಸ್ತರಣೆ ಹೀಗೆ ರೈಲ್ವೆ ಬಳಕೆದಾರರ ಸಭೆ ಕರೆದು ಮಾರ್ಗದರ್ಶನ ಪಡೆದುಕೊಂಡು ಕಾಯ್ಮೋಖವಾಗಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರ ರೈಲು ನಿಲ್ದಾಣದಲ್ಲಿ ದಾನಿಗಳಾದ ರಾಘವೇಂದ್ರ ಜ್ಯುವೆಲ್ಲರ್ಸ್ ಮಾಲೀಕರಾದ ವೆಂಕಟೇಶ್ ಶೇಟ್ ನೀಡಲ್ಪಟ್ಟ ಪ್ರಯಾಣಿಕರ ಶೆಲ್ಟರ್ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಡುಗೆ ನೀಡಿದ ರಾಘವೇಂದ್ರ ಜ್ಯುವೆಲ್ಲರ್ಸ್ ಮಾಲೀಕರಾದ ವೆಂಕಟೇಶ್ ಶೇಟ್, ಗೀತಾ ವೆಂಕಟೇಶ್ ಶೇಟ್, ಕಾರ್ತಿಕ್ ಶೇಟ್ ಇವರನ್ನು ಸನ್ಮಾನಿಸಲಾಯಿತು. ನೂತನ ಸಂಸದರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಮನವಿಯನ್ನು ಸಂಸದರಿಗೆ ನೀಡಿದರು. ಕುಂದಾಪುರ ರೈಲುನಿಲ್ದಾಣ ಮೇಲ್ದರ್ಜೇಗೇರಿಸುವುದು, ಹಾಗು ವಿವಿದ ರೈಲುಗಳ ನಿಲುಗಡೆ. ಕೊಂಕಣ ರೈಲ್ವೆ ಮತ್ತು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡುವುದು, ಕುಂದಾಪುರ ಮತ್ತು ಬೆಂಗಳೂರು ನಡುವೆ ಪಡೀಲ್ ಬೈಪಾಸ್ ಮೂಲಕ ಸಾಪ್ತಾಹಿಕ ರೈಲು, ಉಡುಪಿ ಜಿಲ್ಲೆಗೆ ವಿಮಾನ ನಿಲ್ದಾಣ, ಕುಂದಾಪುರ ತಿರುಪತಿ, ಕುಂದಾಪುರ ವಾರಣಾಸಿ ಹೊಸ ರೈಲುಗಳು, ಬೆಂಗಳೂರು ರೈಲ್ವೆ ಮಾರ್ಗದ ಉನ್ನತೀಕರಣ, ಜತೆಗೆ ಕರಾವಳಿಗರ ಜೀವನಾಡಿ ಪಂಚಗಂಗಾ ರೈಲಿನ ಸಮಯ ಸುಧಾರಣೆ ಹಾಗು ಗುಣಮಟ್ಟ ಸುಧಾರಣೆ ಮಾಡುವಂತೆ ಮನವಿ ಸಲ್ಲಿಸಿದರು.
ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಗಣೇಶ್ ಪುತ್ರನ್ ಮಾತನಾಡಿ, ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಈಗಾಗಲೇ ಹಲವು ಸೌಲಭ್ಯಗಳನ್ನು ಒದಗಿಸುವ ಕೆಲಸವಾಗಿದೆ. ಈಗ ವೆಂಕಟೇಶ ಶೇಟ್ ಅವರು ಸ್ವಯಂಪ್ರೇರಿತವಾಗಿ ಶೆಲ್ಟರ್ನ್ನು ಸುಮಾರು 2 ಲಕ್ಷ ರೂ ವೆಚ್ಚದಲ್ಲಿ ಮಾಡಿಕೊಟ್ಟಿದ್ದಾರೆ. ಇದು ರೈಲ್ವೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದ ಅವರು ಶ್ರೀನಿವಾಸ ಪೂಜಾರಿ ಅವರು 3ನೇ ಬಾರಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅವರು ಸಂಸದರಾಗಿದ್ದು ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಗೆ ದೊಡ್ಡ ಶಕ್ತಿ ಬಂದಿದೆ ಎಂದರು.
ಸಂಚಾಲಕ ವಿವೇಕ್ ನಾಯಕ್, ಟಿ.ಪ್ರವೀಣ್, ಉದಯ ಭಂಡಾರ್ ಕರ್, ಗೌತಮ್ ಶೆಟ್ಟಿ, ಚಂದ್ರ ಕುಂಭಾಶಿ, ರಾಘವೇಂದ್ರ ಶೇಟ್, ಕೆಂಚನೂರು ಸೋಮಶೇಖರ ಶೆಟ್ಟಿ, ಜೋಯ್ ಕರ್ವೇಲ್ಲೊ, ತಮ್ಮಯ್ಯ ಭಂಡಾರ್ ಕರ್, ನಾಗರಾಜ ಆಚಾರ್ಯ, ಅಭಿಜಿತ್ ಸಾರಂಗ, ಪುಷ್ಪರಾಜ ಶೇಟ್ ರೈಲ್ವೆ ಇಲಾಕೆಯ ಹಿರಿಯ ಸಂಚಾರ ವ್ಯವಸ್ಥಾಪಕ ದಿಲೀಪ್ ಡಿ. ಭಟ್, ಇಂಜಿನಿಯರ್ ವೆಂಕಟೇಶ್, ಅಧಿಕಾರಿಗಳಾದ ಎಸ್.ಕೆ ಭಟ್ ಮೊದಲಾದವರು ಉಪಸ್ಥಿತರಿದ್ದರು.