ಬೆಳ್ತಂಗಡಿ, ಮೇ13(Daijiworld News/SS): ಹಾಲಿನ ಕ್ಯಾನ್ನ್ನು ಸೈಕಲ್ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ತಂದೆಯವರ ಫೋಟೋ ಟ್ವಿಟರ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ.
ಗರ್ಡಾಡಿ ಗ್ರಾಮದ ನಿವಾಸಿಯಾಗಿರುವ ಮುತ್ತಣ್ಣ ಪೂಂಜಾ ಹಾಲಿನ ಕ್ಯಾನ್ನ್ನು ಸೈಕಲ್ಗೆ ಸಿಕ್ಕಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಚಿತ್ರ ವೈರಲ್ ಆಗುತ್ತಿದೆ. ಮಾತ್ರವಲ್ಲ, ಮಗ ಶಾಸಕನಾದರೂ ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳದೆ ಹಿಂದಿನಂತೆ ಸರಳತೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಮುತ್ತಣ್ಣ ಅವರ ಕೆಲಸಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
ಬದುಕು ನಡೆಸಲು ಕೃಷಿಯನ್ನು ಅವಲಂಬಿಸಿರುವ ಹರೀಶ್ ಪೂಂಜಾ ಅವರ ತಂದೆ ಈ ಹಿಂದೆ ಬೀಡಿ ತಯಾರಿಕಾ ಘಟಕವನ್ನು ಹೊಂದಿದ್ದರು. ಈ ವೇಳೆ ಅವರು ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಈಗಲೂ ಸೈಕಲ್ ಪ್ರಯಾಣವನ್ನೇ ರೂಢಿಯಾಗಿಸಿಕೊಂಡಿರುವ ಮುತ್ತಣ್ಣ ಪೂಂಜಾ, ಡೈರಿಗೆ ಹಾಲು ಹಾಕಿ ಬರಲು ಸೈಕಲ್'ನಲ್ಲೇ ಹೋಗುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಪೂಂಜಾ, ನಾವು ರೈತ ಕುಟುಂಬದವರಾಗಿದ್ದು, ತಂದೆ ಕೃಷಿಯನ್ನೇ ನಂಬಿಕೊಂಡು ನಮ್ಮನ್ನೆಲ್ಲ ಬೆಳೆಸಿದರು. ನಾನು ಶಾಸಕನಾದರೂ ಅವರ ಬದುಕಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೃಷಿಯ ಮತ್ತು ಹೈನುಗಾರಿಕೆಯೇ ಅವರ ಬದುಕಾಗಿದ್ದು, ಇದೇ ಅವರ ಫಿಟ್ನೆಸ್ ಗುಟ್ಟಾಗಿದೆ. ಮುಂಜಾನೆ 6ಕ್ಕೆ ಏಳುವ ಅವರು ತಿಂಡಿ ತಿಂದು ಡೈರಿಗೆ ಹಾಲು ಹಾಕಿ ಬರು್ತಾರೆ. ಬಳಿಕ ಮಧ್ಯಾಹ್ನದವರೆಗೂ ತೋಟದಲ್ಲಿ ಕೆಲಸ ಮಾಡುತ್ತಾರೆ. ಸಣ್ಣದೊಂದು ನಿದ್ದೆ ಮಾಡಿ ಸಂಜೆಗೆ ನಗರಕ್ಕೆ ಹೋಗುತ್ತಾರೆ. ರಾತ್ರಿ 8.30ಕ್ಕೆ ನಿದ್ದೆಗೆ ಜಾರುತ್ತಾರೆ. ಅವರ ಬದುಕಿನ ಶೈಲಿ ಇದು ಎಂದು ಹೇಳಿದ್ದಾರೆ.