ಉಡುಪಿ, ಮೇ 13 (Daijiworld News/SM): ಉಡುಪಿಯ ಮೂಳೂರಿನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮ ಅವರು ಸೋಮವಾರ ಕಾಪುವಿನ ಜಲಂಚಾರು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ದಾರಗೊಂಡಿರುವ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ವತಿಯಿಂದ ದೇವೇಗೌಡ ದಂಪತಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಈ ವೇಳೆ ದೇವಳದ ಮುಖ್ಯಸ್ಥರು ದೇವಳದ ಇತಿಹಾಸವನ್ನು ತಿಳಿಸಿದರು. ಬಳಿಕ ದೇವಸ್ಥಾನದಲ್ಲಿ ಅನ್ನಸಾಂಬಾರು, ಪಲ್ಯ, ಚಪಾತಿ, ಬಾಜಿ, ಮಾವಿನ ರಸಾಯನವನ್ನು ಸವಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೌಡರು, ನಾನು ಈಶ್ವರ ಭಕ್ತ. ಪ್ರತೀ ಸೋಮವಾರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತೇನೆ. ಅದರಂತೆ ಇಲ್ಲಿ ಪೂಜೆ ಸಲ್ಲಿಸಿದ್ದೇನೆ ಎಂದ ಹೇಳಿರು. ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ವಾಸುದೇವ ರಾವ್, ಜಯರಾಮ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.