ಕುಂದಾಪುರ, ಜೂ. 17(DaijiworldNews/AA): ಗೋ ಕಳ್ಳತನಕ್ಕೆ ಯತ್ನಿಸಿ ವಿಫಲವಾದ ಘಟನೆ ಕುಂದಾಪುರದ ಕಮಲಶಿಲೆ ದೇವಸ್ಥಾನದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕಮಲಶಿಲೆ ದೇವಸ್ಥಾನದ ಗೋಶಾಲೆಯಲ್ಲಿ ರಾತ್ರಿ ವೇಳೆಗೆ ಇಬ್ಬರು ಕಳ್ಳರು ದೇವಸ್ಥಾನದ ಎದುರಿನ ಬಾಗಿಲಿನ ಬೀಗ ಮುರಿದು ಬದಿಯ ಬಾಗಿಲ ಮೂಲಕ ಒಳ ನುಗ್ಗಿದ್ದಾರೆ. ಬಳಿಕ 3 ಗೋಗಳ ಹಗ್ಗವನ್ನು ಕತ್ತಿಯಿಂದ ತುಂಡರಿಸಿ ಸಾಗಾಟಕ್ಕೆ ಯತ್ನಿಸಿದ್ದರು.
ಕಮಲಶಿಲೆ ದೇವಸ್ಥಾನದಲ್ಲಿ ಸೈನ್ ಇನ್ ಸೆಕ್ಯುರಿಟೀಸ್ ಸಂಸ್ಥೆಯ ಲೈವ್ ಮಾನಿಟರಿಂಗ್ ಸಿಸಿಟಿವಿ ಹಾಕಿಸಲಾಗಿದೆ. ಈ ಸಂಸ್ಥೆ 24 ತಾಸು ಸಿಸಿಟಿವಿ ಮೇಲೆ ನೇರ ನಿಗಾ ಇಟ್ಟು ಪೊಲೀಸ್ ಇಲಾಖೆಗೆ ಇಂತಹ ಕಳ್ಳತನ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಸಂಶಯಾಸ್ಪದ ಚಟುವಟಿಕೆಗಳ ಮಾಹಿತಿಯನ್ನು ಕೂಡಲೇ ರವಾನಿಸುತ್ತದೆ. ಹೀಗೆ ಗೋ ಕಳ್ಳತನ ನಡೆಯುವ ರಾತ್ರಿ ಸೈನ್ ಇನ್ ಸಿಸಿಟಿವಿ ತಂಡ ಕಳ್ಳತನದ ಮಾಹಿತಿಯನ್ನು ಬೀಟ್ ಪೊಲೀಸ್, ಎಸ್ಐ, ದೇವಾಲಯದ ಭದ್ರತಾ ವಿಭಾಗದವರಿಗೆ ರವಾನಿಸಿದೆ.
ಭದ್ರತಾ ವಿಭಾಗ ದವರು ಕೂಡಲೇ ಗೋಶಾಲೆಗೆ ತೆರಳಿದ್ದು, ಆ ವೇಳೆಗೆ ಶಂಕಿತರು ಸ್ಥಳದಿಂದ ಪರಾರಿಯಾಗಿದ್ದರು. ನಾಪತ್ತೆ ಯಾಗಿದ್ದ ಒಂದು ದನ ದೇವಸ್ಥಾನದ ಬಳಿ ಪತ್ತೆಯಾಗಿದ್ದು, ಉಳಿದೆಲ್ಲಾ ಗೋಗಳು ದೇವಸ್ಥಾನದಲ್ಲೇ ಸುರಕ್ಷಿತವಾಗಿದ್ದವು. ಇನ್ನು ಎಸ್ಐ ಹಾಗೂ ಕುಂದಾಪುರ ಡಿವೈಎಸ್ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.