ಕಾಸರಗೋಡು, 16(DaijiworldNews/AK): ಅನಾರೋಗ್ಯದಿಂದ ತಾಯಿ ಮೃತಪಟ್ಟ 37 ದಿನದ ಮಗುವಿಗೆ ಹಾಲುಣಿಸುವ ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಮೆರಿನ್ ಮಾದರಿ ಮಾನವೀಯತೆ ಹಾಗೂ ತಾಯ್ತನ ಪ್ರದರ್ಶಿಸಿದ್ದಾರೆ.
ಕುಣಿಯ ಬಾಡಿಗೆ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿರುವ ಅಸ್ಸಾಂ ಮೂಲದ ರಾಜೇಶ್ ಬರ್ಮನ್ ಅವರ ಪತ್ನಿ ಏಕಾದಶಿ ಮಾಲಿ ಮೇ 5 ರಂದು ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಅತಿಸಾರದಿಂದ ಬಳಲುತ್ತಿದ್ದ ಆಕೆಯನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಆದರೆ, ಜೂನ್ 13ರಂದು ಆಕೆ ಸಾವನ್ನಪ್ಪಿದ್ದಾಳೆ. ಮಾಲಿಯವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮಗು ರಿಯಾ ಬರ್ಮನ್ ಹಸಿವಿನಿಂದ ಅನಿಯಂತ್ರಿತವಾಗಿ ಅಳಲು ಪ್ರಾರಂಭಿಸಿದಾಗ, ಶುಶ್ರೂಷಾ ಅಧಿಕಾರಿ ಮೆರಿನ್ ಮಗುವನ್ನು ಎತ್ತಿದರು ಮತ್ತು ಮಗುವಿಗೆ ಹಾಲುಣಿಸಿದರು. ಆಕೆಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಪತ್ರೆಯ ಉಪ ಅಧೀಕ್ಷಕ ಡಾ.ಜಮಾಲ್ ಅಹಮದ್, ಸಹೋದರಿ ಮೆರಿನ್ ಅವರ ಮಾನವೀಯ ಕಾರ್ಯಕ್ಕಾಗಿ ಅಭಿನಂದಿಸಿದ್ದಾರೆ.