ಮಂಗಳೂರು, ಜೂ. 15(DaijiworldNews/AA): ಮಂಗಳೂರು ವಿಶ್ವವಿದ್ಯಾನಿಲಯವು ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಡಾ. ರೊನಾಲ್ಡ್ ಕೊಲಾಸೊ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವ ಡಾಕ್ಟರೇಟ್ ಪದವಿಗಳನ್ನು ಪ್ರಧಾನ ಮಾಡಿ ಗೌರವಿಸಿದೆ. ಈ ಬಾರಿ ಗೌರವ ಡಾಕ್ಟರೇಟ್ ಪಡೆದ ಇನ್ನೊರ್ವ ಸಾಧಕ ತುಂಬೆ ಮೊಯ್ದೀನ್ ಅವರು ಕಾರಣಾಂತರಗಳಿಂದ ಘಟಿಕೋತ್ಸವದಲ್ಲಿ ಹಾಜರಾಗಿರಲಿಲ್ಲ.
ಈ ಮೂವರು ಸಾಧಕರಿಗೆ ಕೊಣಾಜೆಯ ವಿವಿ ಕಾಲೇಜಿನಲ್ಲಿ ಇಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ನವದೆಹಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಮಹಾನಿರ್ದೇಶಕ ಪ್ರೊ.ಸಚಿನ್ ಚತುರ್ವೇದಿ ಅವರು ಡಾ. ರೊನಾಲ್ಡ್ ಕೊಲಾಸೊ ಮತ್ತು ಪ್ರಕಾಶ್ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು.
ವಿಶ್ವವಿದ್ಯಾನಿಲಯದ 155 ಅಭ್ಯರ್ಥಿಗಳಿಗೆ ವಿವಿಧ ವಿಭಾಗಗಳಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದ್ದು ಈ ಪೈಕಿ 22 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಕೂಡ ಡಾಕ್ಟರೇಟ್ ಪದವಿಗಳನ್ನು ಪಡೆದರು. ಕಲಾ ವಿಭಾಗದ 51, ವಿಜ್ಞಾನ ವಿಭಾಗದ 73, ವಾಣಿಜ್ಯ ವಿಭಾಗದ 26 ಹಾಗೂ ಶಿಕ್ಷಣ ವಿಭಾಗದ 5 ಅಭ್ಯರ್ಥಿಗಳು ಡಾಕ್ಟರೇಟ್ ಪದವಿಗಳನ್ನು ಪಡೆದರು. ಒಟ್ಟು 168 ರ್ಯಾಂಕ್ಗಳನ್ನು ನೀಡಲಾಗಿದೆ. 72 ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಗಳಿಸಿದ್ದು, ಈ ಪೈಕಿ 52 ಸ್ನಾತಕೋತ್ತರ ವಿದ್ಯಾರ್ಥಿಗಳು 20 ಪದವಿ ವಿದ್ಯಾರ್ಥಿಗಳು ಪ್ರಥಮ ರ್ಯಾಂಕ್ ಗಳಿಸಿದ್ದಾರೆ.
ಡಾ ರೊನಾಲ್ಡ್ ಕೊಲಾಸೊ ಅವರು ಸಾಮಾಜಿಕ, ದತ್ತಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ಅವರಿಗೆ 2023 ರಲ್ಲಿ ಹೌಸ್ ಆಫ್ ಲಾರ್ಡ್ಸ್ ಪ್ರಶಸ್ತಿ, ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಡಿಸ್ಟಿಂಗ್ವಿಶ್ಡ್ ಫೆಲೋಶಿಪ್ ಪ್ರಶಸ್ತಿಯನ್ನು ಗಳಿಸಿದ್ದಾರೆ. 2022 ರಲ್ಲಿ ಡಾ ರೊನಾಲ್ಡ್ ಕೊಲಾಸೊ ಅವರನ್ನು ಪ್ರಮಾಣಪತ್ರದೊಂದಿಗೆ ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನವರು ಗೌರವಿಸಿದರು. 2018ನೇ ವಾರ್ಷಿಕ ಟೈಮ್ಸ್ ನೌ ಗ್ಲೋಬಲ್ ಇಂಡಿಯನ್ ಪ್ರಶಸ್ತಿ. ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 2017ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ಬಹರೇನ್ ನಲ್ಲಿ 2015ರಲ್ಲಿ ಅಂದಿನ ರಾಷ್ಟ್ರಪತಿ ದಿ. ಎ.ಪಿ.ಜೆ. ಅಬ್ದುಲ್ ಕಲಾಂರಿಂದ ಇಂಡಿಯನ್ ಕ್ಲಬ್ ಸೆಂಟಿನರಿ ಅವಾರ್ಡ್, 2018ರ ಅಕ್ಟೋಬರ್ 15ರಂದು ಟೊರಾಂಟೋದ ಸಂಸತ್ ಭವನದಲ್ಲಿ ಕೆನಡಾ ಸರಕಾರದ ಪರವಾಗಿ ಸನ್ಮಾನ. 2010ರಲ್ಲಿ ಮಂಗಳೂರಿನಲ್ಲಿ ನಡೆದ ವಿಶ್ವ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯವರಿಂದ ವಿಶ್ವ ಕೊಂಕಣಿ ಸಮಾಜ ರತ್ನ ಬಿರುದು, ಹೀಗೆ ಕೆನಡಾ ಮತ್ತು ಯುರೋಪ್ ಸೇರಿದಂತೆ ಪ್ರಪಂಚದಾದ್ಯಂತದ ಡಾ ಕೊಲಾಸೊ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.
25 ವರ್ಷಗಳಿಂದ ನಾಯಕರಾಗಿರುವ ಪ್ರಕಾಶ್ ಶೆಟ್ಟಿ ಅವರು, 1993 ರಲ್ಲಿ ಬಂಜಾರವನ್ನು ಪ್ರಾರಂಭಿಸುವುದರೊಂದಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಪ್ರಕಾಶ್ ಶೆಟ್ಟಿ ಅವರು ಐಷಾರಾಮಿ ಬೊಟಿಕ್ ಹೋಟೆಲ್ಗಳು, ಉತ್ತಮ ಊಟದ ರೆಸ್ಟೋರೆಂಟ್ಗಳು ಮತ್ತು ಇತರ ಉದ್ಯಮಗಳನ್ನು ಒಳಗೊಂಡಿರುವ ಒಂದು ಸಂಘಟಿತ ಸಂಸ್ಥೆಯಾದ ಎಂಆರ್ಜಿ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಪ್ರಕಾಶ್ ಶೆಟ್ಟಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಭಾರತ್ ಗೌರವ ರತನ್ ಪ್ರಶಸ್ತಿಯಂತಹ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ತುಂಬೆ ಗ್ರೂಪ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ ತುಂಬೆ ಮೊಯ್ದೀನ್ ಅವರು ತಮ್ಮ ಕುಟುಂಬದ ವ್ಯವಹಾರವನ್ನು ದುಬೈ ಮೂಲದ ಜಾಗತಿಕ ಸಂಘಟಿತ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣದಂತಹ 20 ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು 15,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರೆ. ಅವರು ಸಮುದಾಯಕ್ಕೆ ನೀಡಿದ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟಿದ್ದು, ದುಬೈನ ಅಮಿಟಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮತ್ತು 'ಗಲ್ಫ್ ಕರ್ನಾಟಕ ರತ್ನ' ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಡಾ ಮೊಯ್ದೀನ್ ತುಂಬೆ ಫೌಂಡೇಶನ್ ಮೂಲಕ ದತ್ತಿ ಚಟುವಟಿಕೆಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ತುಂಬೆ ಗ್ರೂಪ್ಗೆ ಅವರ ನಾಯಕತ್ವವು ಗಮನಾರ್ಹ ಬೆಳವಣಿಗೆಯನ್ನು ಉಂಟುಮಾಡಿದೆ.
ಘಟಿಕೋತ್ಸವದಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉಪಸ್ಥಿತರಿದ್ದರು.