ಮಂಗಳೂರು,ಮೇ13(DaijiworldNews/AZM):ಮಂಗಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇದರಿಂದ ಆಕ್ರೋಶಿತರಾದ ಜನತೆ ಇಲ್ಲಿನ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದು, ವಿಶೇಷ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.
ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಂಟಾಗಲು ಜನಪ್ರತಿನಿಧಿಗಳ ಧೋರಣೆಯೇ ಮುಖ್ಯ ಕಾರಣವಾಗಿದ್ದು, ಜಿಲ್ಲೆಯ ಎಂಟು ಶಾಸಕರ ಫೋಟೋದ ಪ್ಲೆಕ್ಸ್ ಅನ್ನು ಹಾಕಿ ಅದರ ಕೆಳಗೆ ತಮ್ಮ ಆಕ್ರೋಶದ ಮಾತುಗಳನ್ನು ಬರೆದು ವಿಶೇಷ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.
ಫ್ಲೆಕ್ಸ್ ನಲ್ಲಿ ಈ ರೀತಿಯಲ್ಲಿ ಬರೆಯಲಾಗಿದೆ.
ನಿಮ್ಮನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರು ಮತ ಹಾಕಿ ಚುನಾಯಿಸಿದ್ದು, 40 ಲಕ್ಷದ ಕಾರಲ್ಲಿ ಶೋಕಿ ಮಾಡಲು ಅಲ್ಲ. ನಮ್ಮ ಜಿಲ್ಲೆಯ ಜನರಿಗೆ ಈಗ ನೀರಿಲ್ಲ. ಮೊದಲು ಎತ್ತಿನಹೊಳೆ ಯೋಜನೆ ನಿಲ್ಲಿಸುವಂತೆ ವಿಧಾನಸಭೆಯಲ್ಲಿ ಧರಣಿ ಮಾಡಿ. ಇಲ್ಲವಾದಲ್ಲಿ ಕೂಡಲೇ ರಾಜೀನಾಮೆ ಕೊಟ್ಟು ಅಮರಣಾಂತ ಉಪವಾಸ ಕುಳಿತುಕೊಳ್ಳಿ. ನೀವು ನಿಜವಾದ ಜನಸೇವಕರು ಎಂಬುದನ್ನು ಸಾಬೀತುಪಡಿಸಿ ಎಂದು ಬರೆದಿದ್ದಾರೆ.
ಮತ್ತೊಂದು ಫ್ಲೆಕ್ಸ್ ನಲ್ಲಿ ಮಾಜಿ ಸಿಎಂ ಸದಾನಂದ ಗೌಡ ಮತ್ತು ವೀರಪ್ಪ ಮೊಯ್ಲಿ ವಿರುದ್ದ ಆಕ್ರೋಶದ ಬರಹ ಕಂಡು ಬಂದಿದೆ. ಈ ಇಬ್ಬರ ಫೋಟೋ ಹಾಕಿ 13 ಸಾವಿರ ಕೋಟಿ ರೂಪಾಯಿ ಕಮಿಷನ್ ಆಸೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯನ್ನು ಪಶ್ಚಿಮ ಘಟ್ಟಗಳ ಸಮೇತ ಸರ್ವನಾಶ ಮಾಡಿದ್ದೀರಿ. ಈಗ ಜಿಲ್ಲೆಯ ಜನರು ಚರಂಡಿಯ ಟಾಯ್ಲೆಟ್ ನೀರನ್ನೇ ಫಿಲ್ಟರ್ ಮಾಡಿ ಕುಡಿಯುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕುಲಪುತ್ರರಾದ ವೀರಪ್ಪ ಮೊಯ್ಲಿ ಮತ್ತು ಸದಾನಂದ ಗೌಡರವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಶ್ನೆ ಮಾಡದ, ನಿದ್ರೆಯಲ್ಲಿರುವ ಪ್ರಜೆಗಳಿಂದ ಹಾರ್ದಿಕ ಸ್ವಾಗತ ಎಂದು ವ್ಯಂಗ್ಯವಾಗಿ ಬರೆದಿದ್ದಾರೆ.
ಇನ್ನು ನಗರದ ಎಲ್ಲಾ ಅನಧಿಕೃತ ಫ್ಲೆಕ್ಸ್ ತೆರವು ಮಾಡದ ಹೊರತು ಈ ಪ್ಲೆಕ್ಸ್ ತೆರವು ಮಾಡಿದರೆ ಕಾಲಿನಲ್ಲಿ ಇದ್ದದ್ದು ಕೈಗೆ ತೆಗೆದುಕೊಳ್ಳಕಾಗುತ್ತದೆ ಎಂದು ಮಂಗಳೂರು ನಗರ ಪಾಲಿಕೆಗೆ ಎಚ್ಚರಿಕೆ ನೀಡಲಾಗಿದೆ.