ಮಂಗಳೂರು, ಜೂ 14 (DaijiworldNews/MS): ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊ, ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ.ತುಂಬೆ ಮೊಯ್ದಿನ್ ಹಾಗೂ ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿಯವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಈ ಬಾರಿಯ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವವು ಜೂ.15ರಂದು ಮಧ್ಯಾಹ್ನ 12.15 ಕ್ಕೆ ವಿವಿ ಆವರಣದಲ್ಲಿ ನಡೆಯಲಿದ್ದು ಈ ವೇಳೆ ಈ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು ಎಂದು ವಿವಿಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಮಂಗಳೂರಿನ ವಿವಿ ಕಾಲೇಜಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದ ಅವರು 155 ಮಂದಿಗೆ (22 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು) ಪಿಎಚ್ ಡಿ ಡಾಕ್ಟರೇಟ್ ಪದವಿ, 58 ಚಿನ್ನದ ಪದಕ, 57 ನಗದು ಬಹುಮಾನ, 168 ರ್ಯಾಂಕ್ ಪದವಿ ಪ್ರದಾನ ನಡೆಯಲಿದೆ ಎಂದರು.